
ಬೆಂಗಳೂರು: ದೆಹಲಿಯ ಸೋಮೇಂದ್ರ ಅವರು ನಗರದ ರಾಮಯ್ಯ ಅನ್ವಯಿಕ ವಿಜ್ಞಾನ ವಿವಿಯಲ್ಲಿ ದೃಷ್ಟಿದೋಷವುಳ್ಳವರಿಗೆ ನಡೆದ 19ನೇ ಎಐಸಿಎಫ್‌ಬಿ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಪ್ರಶಸ್ತಿ ಗೆದ್ದುಕೊಂಡರು.
ಸೋಮೇಂದ್ರ, ಕರ್ನಾಟಕದ ಕಿಶನ್ ಗಂಗೊಳ್ಳಿ, ತೆಲಂಗಾಣದ ರಿತ್ವಿಕ್ ಎಂ., ಮಹಾರಾಷ್ಟ್ರದ ಆರ್ಯನ್ ಜೋಶಿ ಮತ್ತು ಒಡಿಶಾದ ಪಾತ್ರ ಸುಭೇಂದ್ರ ಕುಮಾರ್ ಅವರು 9 ಸುತ್ತುಗಳಿಂದ ತಲಾ 6.5 ಪಾಯಿಂಟ್ಸ್ ಗಳಿಸಿದರು. ಆದರೆ ಟೈಬ್ರೇಕ್‌ನಲ್ಲಿ ಉತ್ತಮ ಸ್ಕೋರ್ ಆಧಾರದಲ್ಲಿ ಸೋಮೇಂದ್ರ ಅವರಿಗೆ ಪ್ರಶಸ್ತಿ ಒಲಿಯಿತು.
ಬೆಂಗಳೂರು ರೋಟರಿ ಕ್ಲಬ್, ರಾಮಯ್ಯ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಈ ಟೂರ್ನಿ ನಡೆಯಿತು. ಮಾಂಟೆನಿಗ್ರೊದ ಪೆಟ್ರೊವಾಕ್‌ನಲ್ಲಿ ಈ ವರ್ಷ ನಡೆಯಲಿರುವ ಐಬಿಸಿಎ ದೃಷ್ಟಿದೋಷವುಳ್ಳವರ ವಿಶ್ವ ಟೀಮ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಈ ಟೂರ್ನಿ ಟ್ರಯಲ್ಸ್ ಆಗಿತ್ತು.
13 ರಾಜ್ಯಗಳ 49 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದರು. ಎಂಟು ಬಾರಿಯ ರಾಷ್ಟ್ರೀಯ ಚಾಂಪಿಯನ್ ಕಿಶನ್ ಗಂಗೊಳ್ಳಿ ಎರಡನೇ ಮತ್ತು ರಿತ್ವಿಕ್ ವರು ಮೂರನೇ ಸ್ಥಾನ ಗಳಿಸಿದರು. ಮೊದಲ ಐದು ಸ್ಥಾನ ಪಡೆದವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.