ADVERTISEMENT

ದಕ್ಷಿಣ ಏಷ್ಯಾ ಗೇಮ್ಸ್: ಚಿನ್ನ ಗೆದ್ದ ಆದರ್ಶ

ಪದಕದ ಖಾತೆ ತೆರೆದ ಭಾರತ

ಪಿಟಿಐ
Published 2 ಡಿಸೆಂಬರ್ 2019, 15:33 IST
Last Updated 2 ಡಿಸೆಂಬರ್ 2019, 15:33 IST

ಪೋಖ್ರಾ, ನೇಪಾಳ: ಟ್ರಯಾಥ್ಲಾನ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆಲ್ಲುವುದರೊಂದಿಗೆ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿಭಾರತ ಸೋಮವಾರ ಪದಕದ ಖಾತೆ ತೆರೆದಿದೆ.

ಪುರುಷರ ವೈಯಕ್ತಿಕ ಟ್ರಯಾಥ್ಲಾನ್‌ನಲ್ಲಿ ಆದರ್ಶ್‌ ಎಂ.ಎನ್‌. ಸಿನಿಮೊಲ್‌ ಅವರು ಮೊದಲ ಚಿನ್ನ ತಂದುಕೊಟ್ಟರು. ಇದೇ ವಿಭಾಗದಲ್ಲಿ ಈಶ್ವರಜೀತ್‌ ಶ್ರೀಕೋಮ್‌ ಬೆಳ್ಳಿ ಗೆದ್ದರು. ಮಹಿಳೆಯರ ಟ್ರಯಾಥ್ಲಾನ್‌ ವೈಯಕ್ತಿಕ ವಿಭಾಗದಲ್ಲಿ ತೌದಮ್‌ ಸರೋಜಿನಿ ದೇವಿ ಮತ್ತು ಮೋಹನ್‌ ಪ್ರಜ್ಞಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿ ಸಂಭ್ರಮಿಸಿದರು.

ವೈಯಕ್ತಿಕ ವಿಭಾಗದ ಟ್ರಯಾಥ್ಲಾನ್‌ 750 ಮೀಟರ್‌ ಈಜು, 20 ಕಿ.ಮೀ. ಬೈಕ್ ರೇಸ್‌ ಹಾಗೂ 5 ಕಿ.ಮೀ. ಓಟವನ್ನು ಒಳಗೊಂಡಿದೆ.

ADVERTISEMENT

ಚಿನ್ನ ಗೆದ್ದ ಸಿನಿಮೊಲ್‌ ಅವರು ಕೊನೆಯ ಸ್ಪರ್ಧೆಯಾದ 5 ಕಿ.ಮೀ. ಓಟವನ್ನು 1 ತಾಸು 2 ನಿಮಿಷ 51 ಸೆಕೆಂಡುಗಳಲ್ಲಿ ತಲುಪಿದರೆ, ಈಶ್ವರಜೀತ್‌ 1 ತಾಸು 2 ನಿಮಿಷ 59 ಸೆಕೆಂಡುಗಳಲ್ಲಿ ತಲುಪಿ ಎರಡನೇ ಸ್ಥಾನ ಗಳಿಸಿದರು. ನೇಪಾಳದ ಬಸಂತ ಥರು ಕಂಚು (1 ತಾಸು 3 ನಿಮಿಷ 6 ಸೆಕೆಂಡು) ತಮ್ಮದಾಗಿಸಿಕೊಂಡರು.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಸರೋಜಿನಿ 1 ತಾಸು 14 ನಿಮಿಷದಲ್ಲಿ ನಿಗದಿತ ಗುರಿ ಮುಟ್ಟಿ ಬೆಳ್ಳಿ ಗೆದ್ದರು. ಈ ವಿಭಾಗದ ಚಿನ್ನ ನೇಪಾಳದ ಸೋನಿ ಗುರುಂಗ್‌ (1 ತಾಸು 13 ನಿಮಿಷ 45 ಸೆಕೆಂಡು) ಪಾಲಾಯಿತು. ಭಾರತದ ಪ್ರಜ್ಞಾ (1 ತಾಸು 14 ನಿಮಿಷ 57 ಸೆಕೆಂಡು) ಕಂಚಿನ ಪದಕ ಗಳಿಸಿದರು.

15ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾರತದ 487 ಅಥ್ಲೀಟ್‌ಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.