ADVERTISEMENT

ದಕ್ಷಿಣ ಏಷ್ಯಾ ಕ್ರೀಡಾಕೂಟ: ಅಥ್ಲೆಟಿಕ್ಸ್, ಶೂಟಿಂಗ್‌ನಲ್ಲಿ ಪ್ರಾಬಲ್ಯ

ಎರಡನೇ ದಿನ ಭಾರತಕ್ಕೆ 27 ಪದಕ: ನೇಪಾಳಕ್ಕೆ ಅಗ್ರಸ್ಥಾನ

ಪಿಟಿಐ
Published 3 ಡಿಸೆಂಬರ್ 2019, 18:30 IST
Last Updated 3 ಡಿಸೆಂಬರ್ 2019, 18:30 IST
ಮೆಹುಲಿ ಘೋಷ್‌–ರಾಯಿಟರ್ಸ್ ಚಿತ್ರ
ಮೆಹುಲಿ ಘೋಷ್‌–ರಾಯಿಟರ್ಸ್ ಚಿತ್ರ   

ಕಠ್ಮಂಡು: ಟ್ರ್ಯಾಕ್‌ ಮತ್ತು ಫೀಲ್ಡ್ ಹಾಗೂ ಶೂಟಿಂಗ್‌ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದ ಭಾರತದ ಸ್ಪರ್ಧಿ ಗಳು ದಕ್ಷಿಣ ಏಷ್ಯಾ ಕ್ರೀಡಾಕೂಟ
ದಲ್ಲಿ ಮಂಗಳವಾರ11 ಚಿನ್ನ ಸೇರಿ 27 ಪದಕಗಳನ್ನು ಬಾಚಿಕೊಂಡರು. ಪದಕ ಪಟ್ಟಿಯಲ್ಲಿ ಭಾರತ ಸದ್ಯ ಎರಡನೇ ಸ್ಥಾನದಲ್ಲಿದೆ.

ಕ್ರೀಡಾಕೂಟದ ಎರಡು ದಿನಗಳಲ್ಲಿ ಭಾರತ ಒಟ್ಟು 43 ಪದಕಗಳನ್ನು(18 ಚಿನ್ನ, 16 ಬೆಳ್ಳಿ ಹಾಗೂ 9 ಕಂಚು) ಗೆದ್ದಿದೆ. ನೇಪಾಳ 44 ಪದಕಗಳನ್ನು (23 ಚಿನ್ನ, 9 ಬೆಳ್ಳಿ ಹಾಗೂ 12 ಕಂಚು)ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಶ್ರೀಲಂಕಾ (46, 5 ಚಿನ್ನ, 14 ಬೆಳ್ಳಿ, 27 ಕಂಚು) ಮೂರನೇ ಸ್ಥಾನದಲ್ಲಿದೆ.

ಟೇಕ್ವಾಂಡೊ ಸ್ಪರ್ಧಿಗಳು 1 ಚಿನ್ನ ಹಾಗೂ 3 ಕಂಚು ಜಯಿಸಿದರು. ಪುರುಷ ಹಾಗೂ ಮಹಿಳಾ ಟೇಬಲ್‌ ಟೆನಿಸ್‌ ತಂಡಗಳು ಚಿನ್ನದ ಗರಿ ಮುಡಿಸಿಕೊಂಡವು.

ADVERTISEMENT

ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ ಮಂಗಳವಾರ ಭಾರತ ಎಲ್ಲ ಪದಕಗಳನ್ನು ಬಾಚಿ ಕೊಂಡಿತು. ವಿಶ್ವದಾಖಲೆಗಿಂತ ಹೆಚ್ಚಿನ ಸ್ಕೋರ್‌ ದಾಖಲಿಸಿದ ಮೆಹುಲಿ ಘೋಷ್‌ ಚಿನ್ನಕ್ಕೆ ಮುತ್ತಿಟ್ಟರು.

ಆದರೆ ಅವರ ಈ ಸಾಧನೆಯನ್ನು ವಿಶ್ವ ದಾಖಲೆ ಎಂದು ಪರಿಗಣಿಸಲಾಗಿಲ್ಲ. ದಕ್ಷಿಣ ಏಷ್ಯಾ ಕ್ರೀಡಾಕೂಟದ ಫಲಿತಾಂಶಗಳನ್ನು ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ ಫೆಡರೇಷನ್‌ (ಐಎಸ್‌ಎಸ್‌ಎಫ್‌) ದಾಖಲೆಯಾಗಿ ಅಂಗೀಕರಿಸುವುದಿಲ್ಲ.

10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿಯೂ ಭಾರತ ಚಿನ್ನ ಗಳಿಸಿತು. ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಮೆಹುಲಿ 253.3 ಪಾಯಿಂಟ್ಸ್ ದಾಖಲಿಸಿದರು. ಅವರು ಸದ್ಯದ ವಿಶ್ವದಾಖಲೆಗಿಂತ 0.4 ಹೆಚ್ಚು ಪಾಯಿಂಟ್ಸ್ ಕಲೆಹಾಕಿದರು. ಈ ವಿಭಾಗದವಿಶ್ವದಾಖಲೆ ಭಾರತದವರೇ ಆದ ಅಪೂರ್ವಿ ಚಾಂಡೇಲ (252.9) ಹೆಸರಿನಲ್ಲಿದೆ.

ಶ್ರಿಯಾಂಕಾ ಸಾದಂಗಿ (250.8) ಬೆಳ್ಳಿ ಗಳಿಸಿದರೆ, ಶ್ರೇಯಾ ಅಗರವಾಲ್‌ (227.2) ಕಂಚು ತಮ್ಮದಾಗಿಸಿಕೊಂಡರು.

ಪುರುಷರ 50 ಮೀ. 3 ಪೊಸಿಷನ್ಸ್ ವಿಭಾಗದಲ್ಲಿ ಚೈನ್‌ಸಿಂಗ್‌ ಅವರಿಗೆ ಚಿನ್ನ ಹಾಗೂ ಅಖಿಲ್‌ ಶೆರಾನ್‌ ಅವರಿಗೆ ಬೆಳ್ಳಿ ಒಲಿಯಿತು. ಯೋಗೇಶ್‌ ಸಿಂಗ್‌ ಹಾಗೂ ಗುರುಪ್ರೀತ್‌ ಸಿಂಗ್‌ ಅವರು 25 ಮೀ. ಸೆಂಟರ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು.

ವಾಲಿಬಾಲ್‌ ತಂಡಗಳಿಗೆ ಚಿನ್ನ: ವಾಲಿಬಾಲ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚಿನ್ನ ಗೆದ್ದವು. ಪುರುಷರ ತಂಡ ಫೈನಲ್‌ನಲ್ಲಿ ಪಾಕಿಸ್ತಾನವನ್ನು 20–25, 25–15, 25–17, 29–27ರಿಂದ ಮಣಿಸಿತು. ಮಹಿಳಾ ತಂಡ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ನೇಪಾಳ ತಂಡವನ್ನು 25–17, 23–25, 21–25, 25–20, 15–6ರಿಂದ ಸೋಲಿಸಿತು.

ಫೈನಲ್‌ಗೆ ಕೊಕ್ಕೊ ತಂಡಗಳು: ಶ್ರೀಲಂಕಾ ತಂಡಗಳ ಎದುರು ಸೆಮಿಫೈನಲ್‌ಗಳಲ್ಲಿ ಜಯ ಕಂಡ ಭಾರತದ ಪುರುಷ ಮತ್ತು ಮಹಿಳಾ ಕೊಕ್ಕೊ ತಂಡಗಳು ಟೂರ್ನಿಯ ಫೈನಲ್‌ ಪ್ರವೇಶಿಸಿದವು.

ಮಹಿಳಾ ಫುಟ್‌ಬಾಲ್‌ನಲ್ಲಿ ಭಾರತ ಮಾಲ್ಡೀವ್ಸ್ ತಂಡವನ್ನು 5–0ಯಿಂದ ಮಣಿಸಿತು. ಭಾರತದ ಪರ ಬಾಲಾ ದೇವಿ ಎರಡು ಗೋಲು ಗಳಿಸಿದರು.

ಅಥ್ಲೀಟ್‌ಗಳ ಆಧಿಪತ್ಯ

ಕ್ರೀಡಾಕೂಟದ ಟ್ರ್ಯಾಕ್‌ ಮತ್ತು ಫೀಲ್ಡ್ ವಿಭಾಗದಲ್ಲಿ ಮಂಗಳವಾರ ಭಾರತದ ಸ್ಪರ್ಧಿಗಳು 10 ಪದಕಗಳನ್ನು ಬಾಚಿಕೊಂಡರು.

ಅರ್ಚನಾ ಸುಶೀಂದ್ರನ್‌ಮಹಿಳೆಯರ (100 ಮೀ.ಓಟ), ಎಂ.ಜಶ್ನಾ (ಮಹಿಳೆಯರ ಹೈಜಂಪ್‌), ಸರ್ವೇಶ್‌ ಅನಿಲ್‌ ಕುಶಾರೆ (ಪುರುಷರ ಹೈಜಂಪ್‌) ಅಜಯ್‌ ಕುಮಾರ್‌ ಸರೋಜ್‌ (ಪುರುಷರ 1500 ಮೀ.) ಚಿನ್ನ ಗೆದ್ದು ಸಂಭ್ರಮಿಸಿದರು.

100 ಮೀ. ಓಟವನ್ನು ಅರ್ಚನಾ 11.80 ಸೆಕೆಂಡುಗಳಲ್ಲಿ ಕ್ರಮಿಸಿದರು. ಶ್ರೀಲಂಕಾದ ತನುಜಿ ಅಮಾಶಾ (11.82) ಬೆಳ್ಳಿ ಹಾಗೂ ಲಕ್ಷಿಕಾ ಸುಗಂಧ (11.84) ಕಂಚು ಗೆದ್ದರು. ಮಹಿಳೆಯರ ಹೈಜಂಪ್‌ನಲ್ಲಿ 1.73 ಮೀ. ಸಾಧನೆ ಮಾಡಿದ ಜಶ್ನಾ ಚಿನ್ನಕ್ಕೆ ಮುತ್ತಿಟ್ಟರೆ, ರುಬಿನಾ ಯಾದವ್‌ (1.69 ಮೀ.) ಕಂಚು ಗೆದ್ದರು.

ಪುರುಷರ ಹೈಜಂಪ್‌ನಲ್ಲಿ ಕುಶಾರೆ 2.21 ಮೀ. ಜಿಗಿದರೆ, ಚೇತನ್‌ ಬಾಲಸುಬ್ರಮಣ್ಯ (2.16 ಮೀ.) ಬೆಳ್ಳಿ ಪದಕ ಗಳಿಸಿದರು.

ಮಹಿಳೆಯರ 10,000 ಮೀ. ಓಟದಲ್ಲಿ ಕವಿತಾ ಯಾದವ್‌ (35 ನಿಮಿಷ 7.95 ಸೆಕೆಂಡು) ಬೆಳ್ಳಿ ಗೆದ್ದರು.

ಅಜಯ್‌ಕುಮಾರ್‌ ಸರೋಜ್‌ ಅವರು ಪುರುಷರ 1500 ಮೀ. ಓಟವನ್ನು 3 ನಿಮಿಷ 54.18 ಸೆಕೆಂಡುಗಳಲ್ಲಿ ಕೊನೆಗೊಳಿಸಿ ಚಿನ್ನ ಗೆದ್ದರು. ಈ ವಿಭಾಗದ ಬೆಳ್ಳಿ ಅಜಿತ್‌ ಕುಮಾರ್‌ (3 ನಿಮಿಷ 57.18 ಸೆಕೆಂಡು) ಪಾಲಾಯಿತು.

ಇದಕ್ಕೂ ಮೊದಲು ನಡೆದ ಮಹಿಳೆಯರ 1500 ಮೀ. ಓಟದಲ್ಲಿ ಭಾರತದ ಚಂದಾ 4 ನಿಮಿಷ 34.51 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚಿತ್ರಾ ಪಾಲಕೀಜ್‌ (4 ನಿಮಿಷ 35.46 ಸೆಕೆಂಡುಗಳು) ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.