ADVERTISEMENT

ದಕ್ಷಿಣ ಏಷ್ಯಾ ಕ್ರೀಡಾಕೂಟ | ಟಿಟಿ: ಡಬಲ್ಸ್‌ನಲ್ಲಿ ಚಿನ್ನದ ಗರಿ

ಮೂರನೇ ದಿನ 29 ಪದಕಗಳನ್ನು ಬಾಚಿಕೊಂಡ ಭಾರತ

ಪಿಟಿಐ
Published 4 ಡಿಸೆಂಬರ್ 2019, 19:45 IST
Last Updated 4 ಡಿಸೆಂಬರ್ 2019, 19:45 IST
ಹರ್ಮೀತ್‌ ದೇಸಾಯಿ–ಪಿಟಿಐ ಚಿತ್ರ
ಹರ್ಮೀತ್‌ ದೇಸಾಯಿ–ಪಿಟಿಐ ಚಿತ್ರ   

ಪೋಖರಾ: ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಬುಧವಾರ ಭಾರತದ ಟೇಬಲ್‌ ಟೆನಿಸ್‌ ಆಟಗಾರರು ಡಬಲ್ಸ್ ವಿಭಾಗದಲ್ಲಿ ಪಾರಮ್ಯ ಮೆರೆದರು. ಪುರುಷರ, ಮಹಿಳೆಯರ ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದು ಸಂಭ್ರಮಿಸಿದರು.

ಭಾರತ ಮೂರನೇ ದಿನ 15 ಚಿನ್ನದ ಪದಕ ಸೇರಿ ಒಟ್ಟು 29 ಪದಕಗಳನ್ನು ಗೆದ್ದುಕೊಂಡು ಪ್ರಾಬಲ್ಯ ಮುಂದುವರಿಸಿತು.

ಭಾರತ ‍ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಆತಿಥೇಯ ನೇಪಾಳ ಎರಡನೇ ಸ್ಥಾನದಲ್ಲಿದೆ.

ADVERTISEMENT

ಪುರುಷರ ಡಬಲ್ಸ್‌ ಟೇಬಲ್‌ ಟೆನಿಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ಹರ್ಮೀತ್‌ ದೇಸಾಯಿ– ಅಂಥೋಣಿ ಅಮಲ್‌ರಾಜ್‌ ಜೋಡಿಯು ತಮ್ಮದೇ ದೇಶದ ಸನಿಲ್‌ ಶೆಟ್ಟಿ–ಸುಧಾಂಷು ಗ್ರೋವರ್‌ ಎದುರು 8–11, 11–7, 11–5, 8–11, 12–10ರಿಂದಗೆದ್ದು ಚಿನ್ನದ ಪದಕ ಗಳಿಸಿದರು. ಪರಾಜಿತ ಜೋಡಿ ಬೆಳ್ಳಿ ಗೆದ್ದಿತು.

ಮಹಿಳಾ ಡಬಲ್ಸ್‌ನಲ್ಲಿ ಭಾರತದ ಮಧುರಿಕಾ ಪಾಟ್ಕರ್‌–ಶ್ರೀಜಾ ಅಕುಲಾ ಅವರು ತಮ್ಮದೇ ದೇಶದ ಸುತೀರ್ಥ ಮುಖರ್ಜಿ–ಐಹಿಕಾ ಮುಖರ್ಜಿ ಎದುರು 2–11, 11–8, 11–8, 11–6, 5–11, 11–5ರಿಂದ ಜಯಿಸಿ ಚಿನ್ನಕ್ಕೆ ಮುತ್ತಿಟ್ಟರು.

ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಹರ್ಮೀತ್‌– ಸುತೀರ್ಥ ಅವರು ಅಮಲ್‌ರಾಜ್‌–ಐಹಿಕಾ ಎದುರು 11–6, 9–11, 11–6, 11–6, 11–8ರಿಂದ ಗೆದ್ದರು.

ಬ್ಯಾಡ್ಮಿಂಟನ್‌ನಲ್ಲೂ ಮುಂದು: ಬ್ಯಾಡ್ಮಿಂಟನ್‌ನ ವೈಯಕ್ತಿಕ ವಿಭಾಗದಲ್ಲಿ ನಾಲ್ವರು ಮತ್ತು ಪುರುಷ, ಮಹಿಳಾ, ಮಿಶ್ರ ವಿಭಾಗದ ಡಬಲ್ಸ್ ಜೋಡಿಗಳು ನಾಲ್ಕರ ಘಟ್ಟ ತಲುಪಿದರು.

ಪುರುಷರ ಸಿಂಗಲ್ಸ್ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಿರಿಲ್‌ ವರ್ಮಾ ಅವರು ಪಾಕಿಸ್ತಾನದ ಮುರಾದ್‌ ಅಲಿ ಅವರನ್ನು 21–12, 21–17ರಿಂದ ಮಣಿಸಿ ಗೆಲುವಿನ ಆರಂಭ ಮಾಡಿದರು. ಮಹಿಳಾ ಸಿಂಗಲ್ಸ್‌ನಲ್ಲಿ 16 ವರ್ಷದ ಗಾಯತ್ರಿ ಗೋಪಿಚಂದ್‌ ಪಾಕಿಸ್ತಾನದ ಎರಡನೇ ಶ್ರೇಯಾಂಕದ ಮೆಹೂರ್‌ ಶೆಹಜಾದ್‌ ಅವರಿಗೆ 21–15, 21–16ರಿಂದ ಆಘಾತ ನೀಡಿದರು.

ಎಂಟರಘಟ್ಟದ ಇನ್ನೊಂದು ಪಂದ್ಯ ದಲ್ಲಿ ಚಲಿಹಾ, ಪಾಕಿಸ್ತಾನದ ಎದುರಾಳಿ ಪಲ್ವಾಷಾ ಬಶೀರ್‌ ಎದುರು 21–9, 21–7ರಿಂದ ಗೆದ್ದರು.

ಅರಿಮನ್‌ ಟಂಡನ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಮತ್ತೊಬ್ಬ ಆಟಗಾರ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು 21–17, 21–17ರಿಂದ ಶ್ರೀಲಂಕಾದ ರಣತುಷ್ಕಾ ಕರುಣಾತಿಲಕೆ ವಿರುದ್ಧ ಜಯಿಸಿದರು.

ಮಹಿಳಾ ಡಬಲ್ಸ್‌ನಲ್ಲಿ ಕುಹೂ ಗರ್ಗ್‌–ಅನುಷ್ಕಾ ಪಾರಿಖ್‌ ಮತ್ತು ಮೇಘನಾ ಜಕ್ಕಂಪುಡಿ–ಎಸ್‌.ನೆಲಕುರ್ತಿ ಜೋಡಿಗಳು ಬಾಂಗ್ಲಾದೇಶದ ಎದುರಾಳಿಗಳ ಎದುರು ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದವು.

ಗರ್ಗ್‌–ಪಾರಿಖ್‌ ಅವರು ಬ್ರಿಸ್ಟಿ ಖತುನ್‌–ರೆಹಾನಾ ಖತುನ್‌ ವಿರುದ್ಧ 21–18, 21–11ರಿಂದಲೂ, ಜಕ್ಕಂಪುಡಿ–ನೆಲಕುರ್ತಿ ಜೋಡಿಯು ಶಾಲ್ಪಾ ಅಖ್ತರ್‌–ಅಲಿನಾ ಸುಲ್ತಾನಾ ಎದುರು 21–14, 21–11ರಿಂದ ಗೆಲುವಿನ ನಗೆ ಬೀರಿದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಧ್ರುವ ಕಪಿಲ–ಜಕ್ಕಂಪುಡಿ ಜೋಡಿಯು ಪ್ರಬಲ ಹೋರಾಟ ನೀಡಿತು. ಶ್ರೀಲಂಕಾದ ರಣತುಷ್ಕಾ ಕರುಣಾತಿಲಕೆ–ಕವಿಂದಿ ಸಿರಿಮನ್ನಗೆ ವಿರುದ್ಧ 21–14, 26–24ರಿಂದ ಜಯದ ನಿಟ್ಟುಸಿರು ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.