ADVERTISEMENT

ಹಾಕಿ ವಿಶ್ವಕಪ್‌: ಗೆಲುವಿನ ವಿಶ್ವಾಸದಲ್ಲಿರುವ ಭಾರತಕ್ಕೆ ಇಂಗ್ಲೆಂಡ್ ಸವಾಲು

ಪಿಟಿಐ
Published 14 ಜನವರಿ 2023, 18:46 IST
Last Updated 14 ಜನವರಿ 2023, 18:46 IST
ಭಾರತ ತಂಡದ ಆಟಗಾರರು– ಪಿಟಿಐ ಚಿತ್ರ
ಭಾರತ ತಂಡದ ಆಟಗಾರರು– ಪಿಟಿಐ ಚಿತ್ರ   

ರೂರ್ಕೆಲಾ: ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದಿರುವ ಭಾರತ ತಂಡಕ್ಕೆ ಭಾನುವಾರ ಬಲಿಷ್ಠ ಇಂಗ್ಲೆಂಡ್ ಸವಾಲು ಎದುರಾಗಿದೆ.

ಡಿ ಗುಂಪಿನ ಈ ಪಂದ್ಯಕ್ಕೆ ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣ ಸಜ್ಜಾಗಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 2–0ಯಿಂದ ಸ್ಪೇನ್ ತಂಡವನ್ನು ಪರಾಭವಗೊಳಿಸಿತ್ತು. ಅದೇ ಲಯವನ್ನು ಮುಂದುವರಿಸುವ ತವಕದಲ್ಲಿ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಬಳಗವಿದೆ.

ಸ್ಪೇನ್ ಎದುರಿನ ಹಣಾಹಣಿಯಲ್ಲಿ ಭಾರತ ತಂಡವು ಅಟ್ಯಾಕಿಂಗ್‌ ಹಾಗೂ ಡಿಫೆನ್ಸ್‌ನಲ್ಲಿ ತೋರಿದ ಉತ್ತಮ ಪ್ರದರ್ಶನವು ಕೋಚ್‌ ಗ್ರಹಾಂ ರೀಡ್‌ ಅವರಿಗೆ ಸಂತಸ ತಂದಿದೆ.

ADVERTISEMENT

‘ಮೊದಲ ಪಂದ್ಯ ನಮ್ಮದಾಗಿಸಿಕೊಂಡಿದ್ದು ಸಂತಸಗ ಸಂಗತಿ. ಆ ಪಂದ್ಯದಲ್ಲಿ ನಮ್ಮ ಡಿಫೆನ್ಸ್ ವಿಭಾಗವು ಚೆಂಡನ್ನು ಚೆನ್ನಾಗಿ ನಿಯಂತ್ರಿಸಿತು. ವಿಶ್ವಕಪ್‌ ಗೆಲುವಿಗೆ ಬೇಕಾಗಿರುವುದು ಇದೇ ತಂತ್ರ. ಮುಂದಿನ ಪಂದ್ಯದಲ್ಲೂ ಉತ್ತಮ ಲಯ ಮುಂದುವರಿಸುವೆವು‘ ಎಂದು ಗ್ರಹಾಂ ರೀಡ್‌ ಹೇಳಿದ್ದಾರೆ.

ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ಎಡವುತ್ತಿರುವ ಭಾರತದ ಆಟಗಾರರು ಆ ವಿಭಾಗದಲ್ಲಿ ಸುಧಾರಿಸಬೇಕಿದೆ. ಕ್ವಾರ್ಟರ್‌ಫೈನಲ್‌ ಹಂತಕ್ಕೆ ಮುಂದುವರಿಯಲು ಭಾರತಕ್ಕೆ ಈ ಪಂದ್ಯದ ಗೆಲುವು ಮಹತ್ವದ್ದೆನಿಸಿದೆ.

ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ 5–0 ಅಂತರದಿಂದ ವೇಲ್ಸ್ ತಂಡವನ್ನು ಪರಾಭವಗೊಳಿಸಿದ್ದು, ಆತ್ಮವಿಶ್ವಾಸದಲ್ಲಿದೆ.

ವೇಲ್ಸ್ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಗೋಲ್‌ಕೀಪರ್ ಆಲಿವರ್ ಪೇನ್‌ ಭದ್ರಕೋಟೆಯಾಗಿ ಎದುರಾಳಿಯ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು. ಅವರ ಸವಾಲು ಮೀರಿ ಭಾರತದ ಆಟಗಾರರು ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಬೇಕು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಪಂದ್ಯವು 4–4ರಿಂದ ಡ್ರಾ ಆಗಿತ್ತು. ಕಳೆದ ವರ್ಷ ಉಭಯ ತಂಡಗಳು ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಎರಡು ಡ್ರಾ ಆಗಿದ್ದರೆ, ಒಂದರಲ್ಲಿ ಭಾರತ ಜಯ ಸಾಧಿಸಿತ್ತು.

‘ಡಿ‘ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸ್ಪೇನ್ ಮತ್ತು ವೇಲ್ಸ್ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.