ADVERTISEMENT

ಅಂದು ಸ್ಪ್ಯಾನಿಷ್ ಫ್ಲೂ; ಇಂದು ಕೋವಿಡ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 19:30 IST
Last Updated 5 ಏಪ್ರಿಲ್ 2020, 19:30 IST
ಸ್ಪ್ಯಾನಿಷ್ ಪ್ಲೂ ಕಾಡಿದ್ದ ಸಂದರ್ಭದಲ್ಲಿ ನಡೆದ ಬೇಸ್‌ಬಾಲ್‌ ಪಂದ್ಯವೊಂದರ ಚಿತ್ರ
ಸ್ಪ್ಯಾನಿಷ್ ಪ್ಲೂ ಕಾಡಿದ್ದ ಸಂದರ್ಭದಲ್ಲಿ ನಡೆದ ಬೇಸ್‌ಬಾಲ್‌ ಪಂದ್ಯವೊಂದರ ಚಿತ್ರ   

ವಿಶ್ವದ ಕ್ರೀಡಾ ಹಬ್ಬ ಒಲಿಂಪಿಕ್ಸ್ ಒಂದು ವರ್ಷ ಮುಂದೂಡಿಕೆ, ವಿಂಬಲ್ಡನ್ ಟೆನಿಸ್ ಟೂರ್ನಿ ರದ್ದು, ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್, ಕ್ರಿಕೆಟ್ ಮುಂತಾದ ಕ್ರೀಡೆಗಳಿಗೆ ಸಂಬಂಧಿಸಿದ ವಿವಿಧ ಟೂರ್ನಿಗಳು, ಚಾಂಪಿಯನ್‌ಷಿಪ್‌ಗಳು ರದ್ದು ಅಥವಾ ಮುಂದೂಡಿಕೆ…

ಕ್ರೀಡಾ ‘ಅಂಗಳ’ದಲ್ಲಿ ಕೆಲವು ವಾರಗಳಿಂದ ಇಂಥದೇ ಸುದ್ದಿಗಳು. ಕೊರೊನಾ ಹೆಮ್ಮಾರಿ ಇತರ ಎಲ್ಲ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದ ಮೇಲೆಯೂ ಬೀರಿರುವ ಪರಿಣಾಮ ಕಡಿಮೆಯೇನಲ್ಲ. ಸುಮಾರು ಕ್ರೀಡಾ ಕ್ಷೇತ್ರ ಹಿಂದೊಮ್ಮೆ ಇಂಥ ಪರಿಸ್ಥಿತಿ ಅನುಭವಿಸಿ ಒಂದು ಶತಮಾನ ಕಳೆದಿದೆ.

ಮೊದಲನೇ ಜಾಗತಿಕ ಯುದ್ಧ ಮುಗಿಯುವ ಹಂತದಲ್ಲಿ ಜಗತ್ತು ನಿಟ್ಟುಸಿರು ಬಿಡುತ್ತಿರುವಾಗಲೇ ಎರಗಿದ ಸ್ಪ್ಯಾನಿಷ್ ಫ್ಲೂ ಎಂಬ ಜ್ವರ ಕೋಟಿಗಟ್ಟಲೆ ಜನರ ಜೀವಹರಣ ಮಾಡಿದ್ದರೆ, ಜಗತ್ತಿನ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಹೀಗಾಗಿ ಕ್ರೀಡಾಲೋಕವೂ ಈ ಜ್ವರದ ಬಲಿಪಶುವಾಗಿತ್ತು.

ADVERTISEMENT

ಸ್ಪ್ಯಾನಿಷ್ ಫ್ಲೂ ಹೆಚ್ಚು ಕಾಡಿದ್ದು ಬೇಸ್‌ಬಾಲ್ ಕ್ರೀಡೆಯನ್ನು. 1918ರ ಸಾಲಿನ ಬೇಸ್‌ಬಾಲ್ ಲೀಗ್‌ ಏಪ್ರಿಲ್ ತಿಂಗಳಲ್ಲೇ ಆರಂಭಗೊಂಡಿದ್ದವು. ಅಮೆರಿಕ ಸೇನೆಯಲ್ಲಿದ್ದ ಆಟಗಾರರೆಲ್ಲ ಯುದ್ಧಭೂಮಿಯಿಂದ ಮರಳಿ ಬಳಲಿದ್ದರು. ಆದರೂ ಅಧಿಕಾರಿಗಳು ಲೀಗ್‌ ಆರಂಭಿಸಲು ನಿರ್ಧರಿಸಿದ್ದರು. ಆದರೆ ಅನೇಕ ಪಂದ್ಯಗಳನ್ನು ಕೈಬಿಡಲಾಯಿತು. ದುರಂತವೆಂದರೆ, ಫೈನಲ್ ಪಂದ್ಯ ವೀಕ್ಷಿಸಿದ ಸಾವಿರಾರು ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿತು. ಅಮೆರಿಕದಲ್ಲಿ ವೈರಾಣು ಹರಡಲು ಆ ಪಂದ್ಯವೇ ಪ್ರಮುಖ ಕಾರಣವಾಯಿತು. ಫೈನಲ್ ಪಂದ್ಯದಲ್ಲಿ ಆಡಿದ ಕೆಲವು ಆಟಗಾರರಿಗೂ ಜ್ವರ ಬಾಧಿಸಿದರೂ ಪ್ರಾಣಾಪಾಯದಿಂದ ಪಾರಾದರು. ಆದರೆ ಇತರ ಕೆಲವು ಆಟಗಾರರು ಜೀವ ಕಳೆದುಕೊಂಡರು. ಅಂಪೈರ್ ಫ್ರಾನ್ಸಿಸ್ ಸಿಲ್ಕ್ ಲಾಲಿ ಅವರನ್ನೂ ಬೇಸ್‌ಬಾಲ್ ಜಗತ್ತು ಕಳೆದುಕೊಂಡಿತು.

ಉತ್ತರಅಮೆರಿಕದ ಸ್ಟ್ಯಾನ್ಲಿ ಕಪ್ ಐಸ್ ಹಾಕಿಯ 1919ರ ಆವೃತ್ತಿ ಕೂಡ ಸ್ಪ್ಯಾನಿಷ್ ಫ್ಲೂಗೆ ತತ್ತರಿಸಿತು. ಸಿಯಾಟಲ್ ಮೆಟ್ರೊಪಾಲಿಟನ್ಸ್ ಮತ್ತು ಮಾಂಟ್ರಿಯಲ್ ಕೆನೆಡಿಯನ್ಸ್ ಫೈನಲ್ ಪ್ರವೇಶಿಸಿದ್ದವು. ‘ಬೆಸ್ಟ್ ಆಫ್ ಫೈವ್’ ಪಂದ್ಯಗಳ ಹಣಾಹಣಿಯಾಗಿತ್ತು ಫೈನಲ್. ಸಿಯಾಟಲ್ ಐಸ್ ಅರೆನಾದಲ್ಲಿ ನಡೆದ ಫೈನಲ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಎರಡು ಜಯ, ಎರಡು ಸೋಲು ಕಂಡಿದ್ದವು. ಮತ್ತೊಂದು ಪಂದ್ಯ ಸಮ ಆಯಿತು. ಆದ್ದರಿಂದ ವಿಜೇತರನ್ನು ನಿರ್ಣಯಿಸಲು ಆರನೇ ಪಂದ್ಯ ಆಡಿಸಬೇಕಾಯಿತು. ಅಷ್ಟರಲ್ಲಿ ಎರಡೂ ತಂಡಗಳ ಅನೇಕ ಆಟಗಾರರು ಜ್ವರದಿಂದ ಬಳಲಿದರು. ಅವರ ಪೈಕಿ ಹೆಚ್ಚಿನವರು ಕೆನೆಡಿಯನ್ಸ್ ತಂಡದ ಆಟಗಾರರು. ಕೆಲವರು ಆಸ್ಪತ್ರೆ ಸೇರಿದರು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ಸಿಯಾಟಲ್ ತಂಡಕ್ಕೆ ಪ್ರಶಸ್ತಿ ನೀಡಬೇಕು ಎಂಬ ಎದುರಾಳಿ ತಂಡದ ಸಲಹೆಯನ್ನು ಸಿಯಾಟಲ್‌ ತಂಡದ ಕೋಚ್ ವಿನಯದಿಂದ ನಿರಾಕರಿಸಿದರು. ಜಗತ್ತನ್ನೇ ನುಂಗಿದ ಮಹಾರೋಗದ ಕಾರಣಕ್ಕೆ ಯಾರೂ ಸೋಲುವುದು ಸರಿಯಲ್ಲ ಎಂಬುದಾಗಿತ್ತು ಅವರ ವಾದ. ಹೀಗಾಗಿ ಆ ವರ್ಷ ಪ್ರಶಸ್ತಿ ಯಾರಿಗೂ ಸಲ್ಲಲಿಲ್ಲ. ಕೆನಡಿಯನ್ ತಂಡದ ಜೋ ಹಾಲ್ ಜ್ವರಕ್ಕೆ ಬಲಿಯಾದರು. ಮ್ಯಾನೇಜರ್ ಕೆನೆಡಿ ಆಸ್ಪತ್ರೆಯಿಂದ ಮರಳಿದ ಕೆಲವು ತಿಂಗಳ ನಂತರ ತೀರಿಕೊಂಡರು. 1948ರಲ್ಲಿ ಪ್ರಶಸ್ತಿಯನ್ನು ಮರುವಿನ್ಯಾಸಗೊಳಿಸಿದಾಗ ಎರಡೂ ತಂಡಗಳ ಹೆಸರನ್ನು ಸೇರಿಸಲಾಯಿತು.

ಕೊರೊನಾ ವೈರಸ್ ಕೂಡ ಪ್ರಾಣಾಪಾಯ ಮೂಡಿಸುವಂಥದ್ದೇ. ಶತಮಾನದ ನಂತರ ‘ಸಾವಿನ ಜ್ವರ’ ಹೊತ್ತುಕೊಂಡು ಬಂದಿರುವ ಈ ವೈರಸ್ ವಿಶ್ವದಾದ್ಯಂತ ಹರಡಿದೆ. ಈ ಬಾರಿ ಕ್ರೀಡಾ ಸಂಸ್ಥೆಗಳು ಮತ್ತು ಸರ್ಕಾರಗಳು ಎಚ್ಚೆತ್ತುಕೊಂಡು ಸ್ಪರ್ಧೆಗಳನ್ನು ಮುಂದೂಡಿ ಅಥವಾ ರದ್ದು ಮಾಡಿ ವಿವೇಕ ಮೆರೆದಿದ್ದಾರೆ. ಇಲ್ಲವಾದರೆ ರೋಗವನ್ನು ಇನ್ನಷ್ಟು ಹರಡಿದ ಅಪವಾದ ಕ್ರೀಡಾ ಜಗತ್ತಿಗೆ ಅಂಟಿಕೊಳ್ಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.