ಅನಾಹತ್ ಸಿಂಗ್
ಚೆನ್ನೈ (ಪಿಟಿಐ): ಗೆಲುವಿನ ಓಟ ಮುಂದುವರಿಸಿದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಸ್ಕ್ವಾಷ್ ವಿಶ್ವಕಪ್‌ನಲ್ಲಿ ಶುಕ್ರವಾರ 3-0 ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
ಎಕ್ಸ್‌ಪ್ರೆಸ್ ಅವೆನ್ಯೂ ಮಾಲ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅನುಭವಿ ಆಟಗಾರ್ತಿ ಜೋಶ್ನಾ ಚಿನ್ನಪ್ಪ, ಉದಯೋನ್ಮುಖ ತಾರೆ ಅನಾಹತ್ ಸಿಂಗ್ ಮತ್ತು ವಿಶ್ವದ 29ನೇ ಕ್ರಮಾಂಕದ ಅಭಯ್ ಸಿಂಗ್ ಅವರು ಪ್ರಬಲ ಆಟ ಪ್ರದರ್ಶಿಸಿದರು. ಆತಿಥೇಯ ತಂಡವು ಸೆಮಿಫೈನಲ್‌ನಲ್ಲಿ ಈಜಿಪ್ಟ್ ತಂಡವನ್ನು ಎದುರಿಸಲಿದೆ.
ಗುರುವಾರ ಬ್ರೆಜಿಲ್ ವಿರುದ್ಧ ವಾಕ್ ಓವರ್ ಪಡೆದಿದ್ದ ಭಾರತ ತಂಡಕ್ಕೆ ಜೋಶ್ನಾ ಮೊದಲ ಮಹಿಳಾ ಸಿಂಗಲ್ಸ್‌ನಲ್ಲಿ ಕೇವಲ 13 ನಿಮಿಷಗಳಲ್ಲಿ 3-0 (7-4, 7-4, 7-2) ಯಿಂದ ಟೀಗನ್ ರಸೆಲ್ ಅವರನ್ನು ಸೋಲಿಸಿ ಉತ್ತಮ ಆರಂಭ ನೀಡಿದರು.
ಪುರುಷರ ಸಿಂಗಲ್ಸ್‌ನಲ್ಲಿ ಅಭಯ್ 3-0 (7-1, 7-6, 7-1) ಯಿಂದ ಡೆವಾಲ್ಡ್ ವ್ಯಾನ್ ನೀಕೆರ್ಕ್ ವಿರುದ್ಧ ನಿರಾಯಾಸವಾಗಿ ಗೆದ್ದು, ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಟೂರ್ನಿಯ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿಯಾಗಿರುವ ಅನಾಹತ್ ಅವರೂ 3-0 (7-3, 7-3, 7-4) ಅಂತರದಿಂದ ಹೇಲಿ ವಾರ್ಡ್ ವಿರುದ್ಧ ಗೆಲುವು ಸಾಧಿಸಿ, ಭಾರತದ ಸೆಮಿಫೈನಲ್ ಸ್ಥಾನವನ್ನು ದೃಢಪಡಿಸಿದರು.
ದಿನದ ಆರಂಭದಲ್ಲಿ ಅಗ್ರ ಶ್ರೇಯಾಂಕಿತ ಈಜಿಪ್ಟ್ 3-0 ಅಂತರದಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.
ಭಾರತ ತಂಡವು ಗುಂಪು ಹಂತದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಬ್ರೆಜಿಲ್ ವಿರುದ್ಧ ಪಾರಮ್ಯ ಮೆರೆದಿತ್ತು. 2023ರಲ್ಲಿ ಕಂಚಿನ ಪದಕ ಗೆದ್ದಿದ್ದು ವಿಶ್ವಕಪ್‌ನಲ್ಲಿ ಭಾರತದ ಈತನಕದ ಅತ್ಯುತ್ತಮ ಸಾಧನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.