ADVERTISEMENT

ಟೇಬಲ್‌ ಟೆನಿಸ್‌: ಶ್ರೀಜಾಗೆ ಸಿಂಗಲ್ಸ್‌ ಕಿರೀಟ

ಪಿಟಿಐ
Published 25 ಮಾರ್ಚ್ 2024, 16:06 IST
Last Updated 25 ಮಾರ್ಚ್ 2024, 16:06 IST
ಶ್ರೀಜಾ ಅಕುಲಾ
ಶ್ರೀಜಾ ಅಕುಲಾ   

ನವದೆಹಲಿ: ಭಾರತದ ಶ್ರೀಜಾ ಅಕುಲಾ ಅವರು ಲೆಬನಾನ್‌ನ ರಾಜಧಾನಿ ಬೇರೂತ್‌ನಲ್ಲಿ ನಡೆದ ಡಬ್ಲ್ಯುಟಿಟಿ ಫೀಡರ್‌ ಸರಣಿಯ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು. ಪುರುಷರ ಡಬಲ್ಸ್‌ನಲ್ಲಿ ಮಾನವ್‌ ಠಕ್ಕರ್‌– ಮನುಷ್‌ ಉತ್ಪಲ್‌ಭಾಯ್ ಷಾ ಜೋಡಿಯು ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ವಿಶ್ವದ 47ನೇ ರ್‍ಯಾಂಕ್‌ನ ಶ್ರೀಜಾ ಅವರು 6-11, 12-10, 11-5, 11-9 ರಿಂದ ಲಕ್ಸೆಂಬರ್ಗ್‌ನ ಸಾರಾ ಡಿ ನಟ್ಟೆ ಅವರನ್ನು ಮಣಿಸಿದರು. 

ಕಾಮನ್‌ವೆಲ್ತ್ ಗೇಮ್ಸ್‌ನ ಮಿಕ್ಸೆಡ್‌ ಡಬಲ್ಸ್ ಚಿನ್ನದ ಪದಕ ವಿಜೇತೆಯಾಗಿರುವ 25 ವರ್ಷದ ಶ್ರೀಜಾ, ಇದೇ ಟೂರ್ನಿಯಲ್ಲಿ ವಿಶ್ವದ 36ನೇ ಕ್ರಮಾಂಕದ ಸುಹ್ ಹ್ಯೊ ವಾನ್ (ದಕ್ಷಿಣ ಕೊರಿಯಾ) ಅವರಿಗೆ ಆಘಾತ ನೀಡಿದ್ದರು.

ADVERTISEMENT

ಶ್ರೀಜಾಗೆ ಲಭಿಸಿದ ಎರಡನೇ ಡಬ್ಲ್ಯುಟಿಟಿ ಸಿಂಗಲ್ಸ್ ಕಿರೀಟ ಇದಾಗಿದೆ. ಜನವರಿಯಲ್ಲಿ ನಡೆದ ಫೀಡರ್ ಕಾರ್ಪಸ್ ಕ್ರಿಸ್ಟಿ ಪ್ರಶಸ್ತಿಯನ್ನು ಅವರು ಮುಡಿಗೇರಿಸಿಕೊಂಡಿದ್ದರು.

ಆದರೆ, ಮಹಿಳೆಯರ ಡಬಲ್ಸ್‌ನಲ್ಲಿ ಶ್ರೀಜಾ ನಿರಾಸೆ ಅನುಭಸಿದರು. ಫೈನಲ್‌ ಹಣಾಹಣಿಯಲ್ಲಿ ಶ್ರೀಜಾ ಮತ್ತು ದಿಯಾ ಚಿತಾಲೆ ಜೋಡಿಯು 11–4, 9–11, 7–11, 6–11ರಿಂದ ಹಾಂಗ್‌ಕಾಂಗ್‌ನ ಡೂ ಹೊಯ್ ಕೆಮ್ ಮತ್ತು ಝು ಚೆಂಗ್‌ಝು ವಿರುದ್ಧ ಸೋತು ರನ್ನರ್ಸ್‌ ಅಪ್‌ ಸ್ಥಾನ ಪಡೆಯಿತು.

ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಮಾನವ್ ಮತ್ತು ಮನುಷ್ 11-7, 11-5, 9-11, 11-6ರಿಂದ ಸ್ವದೇಶದ ಮುದಿತ್ ದಾನಿ ಮತ್ತು ಆಕಾಶ್ ಪಾಲ್ ಅವರನ್ನು ಸೋಲಿಸಿದರು.

ಭಾರತದ ಪಯಮಂಟಿ ಬೈಸ್ಯಾ ಮತ್ತು ಆಕಾಶ್ ಪಾಲ್ ಜೋಡಿಯು 11-9, 7-11, 11-9, 11-0 ರಿಂದ ಸ್ವದೇಶದ ಅನುಭವಿ ಜೋಡಿಯಾದ ಸತ್ಯನ್ ಜ್ಞಾನಶೇಖರನ್ ಮತ್ತು ಮಣಿಕಾ ಬಾತ್ರಾ ಅವರನ್ನು ಸೋಲಿಸಿ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಕಳೆದ ವಾರ ಬೈರುತ್‌ನಲ್ಲಿ ಪುರುಷರ ಸಿಂಗಲ್ಸ್ ಡಬ್ಲ್ಯುಟಿಟಿ ಪ್ರಶಸ್ತಿ ಗೆದ್ದಿದ್ದ ಸತ್ಯನ್‌ ಅವರು ಇಲ್ಲಿ ಸೆಮಿಫೈನಲ್‌ನಲ್ಲಿ ವಿಶ್ವದ 43ನೇ ರ‍್ಯಾಂಕ್‌ನ  ಕಿರಿಲ್ ಗೆರಾಸಿಮೆಂಕೊ (ಕಜಕಿಸ್ತಾನ) ವಿರುದ್ಧ ಮುಗ್ಗರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.