ADVERTISEMENT

ಒಲಿಂಪಿಕ್ಸ್‌ ಪದಕದ ಕೊರಗು ನೀಗಿಸುವೆವು

ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಶ್ರೀಜೇಶ್‌ ಹೇಳಿಕೆ

ಪಿಟಿಐ
Published 17 ಜುಲೈ 2020, 15:39 IST
Last Updated 17 ಜುಲೈ 2020, 15:39 IST
ಪಿ.ಆರ್‌.ಶ್ರೀಜೇಶ್‌ 
ಪಿ.ಆರ್‌.ಶ್ರೀಜೇಶ್‌    

ನವದೆಹಲಿ: ‘ಭಾರತ ಪುರುಷರ ಹಾಕಿ ತಂಡವು ಈಗ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ನಾಲ್ಕು ದಶಕಗಳಿಂದ ಕಾಡುತ್ತಿರುವ ಪದಕದ ಕೊರಗು ನೀಗಿಸುತ್ತೇವೆ’ ಎಂದು ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1980ರ ಮಾಸ್ಕೊ ಒಲಿಂಪಿಕ್ಸ್‌ ಬಳಿಕ ಭಾರತ ತಂಡಕ್ಕೆ ಒಲಿಂಪಿಕ್ಸ್‌ ಪದಕ ಗಗನ ಕುಸುಮವಾಗಿದೆ.

‘ನಾವು ವಿಶ್ವದ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದೇವೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಎಫ್‌ಐಎಚ್‌ ಪ್ರೊ ಲೀಗ್‌ನ ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ. ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನೂ ಒಂದು ವರ್ಷ ಸಮಯವಿದೆ. ನನ್ನ ಪಾಲಿಗೆ ಇದು ಮಹತ್ವದ ಕೂಟ. ಟೋಕಿಯೊದಲ್ಲಿ ಭಾರತದ ಹಾಕಿಯ ವೈಭವ ಮರುಕಳಿಸಲಿದೆ. ಪದಕ ಗೆಲ್ಲಲು ನಾವೆಲ್ಲಾ ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದ್ದಾರೆ.

ADVERTISEMENT

32 ವರ್ಷ ವಯಸ್ಸಿನ ಶ್ರೀಜೇಶ್‌ ಅವರು 2012 ಮತ್ತು 2016ರ ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

‘ನಾವೆಲ್ಲಾ ಈಗ ಟೋಕಿಯೊ ಕೂಟದತ್ತ ಚಿತ್ತ ನೆಟ್ಟಿದ್ದೇವೆ. ಹಿಂದಿನ ತಂಡಕ್ಕೂ ಈಗಿನ ತಂಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತಂಡದಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಹೊಸ ತಂತ್ರಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಂಡಿದ್ದೇವೆ. ಫಿಟ್‌ನೆಸ್‌‌ ವಿಚಾರದಲ್ಲಿ ವಿಶ್ವದ ಇತರ ತಂಡಗಳಿಗಿಂತಲೂ ಒಂದು ಹೆಜ್ಜೆ ಮುಂದಿದ್ದೇವೆ. ತಾಂತ್ರಿಕವಾಗಿಯೂ ಬಲಿಷ್ಠರಾಗಿದ್ದೇವೆ’ ಎಂದು ನುಡಿದಿದ್ದಾರೆ.

‘ನಾವು ಆಕ್ರಮಣಕಾರಿ ಗುಣವನ್ನು ಮೈಗೂಡಿಸಿಕೊಂಡಿದ್ದೇವೆ. ತಂಡದಲ್ಲಿ ಅನೇಕ ಯುವ ಆಟಗಾರರಿದ್ದಾರೆ. ಅವರೆಲ್ಲಾ ವಿಶ್ವದ ಬಲಿಷ್ಠ ತಂಡಗಳ ಎದುರು ಅಮೋಘ ಆಟ ಆಡುತ್ತಿದ್ದಾರೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ’ ಎಂದು ಹೇಳಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಭಾರತ ತಂಡಕ್ಕೆ ಪದಕ ಗೆದ್ದುಕೊಡಬೇಕೆಂಬ ಕನಸು ಎಲ್ಲಾ ಕ್ರೀಡಾಪಟುಗಳಿಗೂ ಇರುತ್ತದೆ. ಆ ಆಸೆನನಗೂ ಇದೆ. 2012ರ ಲಂಡನ್‌ ಒಲಿಂಪಿಕ್ಸ್‌ ನನ್ನ ಪಾಲಿಗೆ ಮೊದಲನೆಯದ್ದಾಗಿತ್ತು. ಆಗ ನನಗೆ 24 ವರ್ಷ ವಯಸ್ಸು. ಆ ಕೂಟದಲ್ಲಿ ಕಣಕ್ಕಿಳಿದಾಗ ರೋಮಾಂಚನಗೊಂಡಿದ್ದೆ. ಆ ಅನುಭವವನ್ನು ಮರೆಯೊಕ್ಕೆ ಸಾಧ್ಯವೇ ಇಲ್ಲ’ ಎಂದಿದ್ದಾರೆ.

‘2012ರ ಕೂಟದಲ್ಲಿ ನಾವು ಕೊನೆಯ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದ್ದೆವು. ಲಂಡನ್‌ನಿಂದ ತವರಿಗೆ ಮರಳಿದ ಬಳಿಕ ಬಲಿಷ್ಠ ತಂಡ ಕಟ್ಟಬೇಕೆಂದು ಪಣ ತೊಟ್ಟಿದ್ದೆ. ಅದನ್ನು ಗಮನದಲ್ಲಿಟ್ಟುಕೊಂಡೇ ನಾವೆಲ್ಲ ಹಗಲಿರುಳು ಶ್ರಮಿಸಿದ್ದೆವು. ಹೀಗಾಗಿ 2014ರ ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

ಶ್ರೀಜೇಶ್‌ ಅವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.