ADVERTISEMENT

ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌: ಶ್ರೀಹರಿಗೆ ಮಣಿದ ಅಭಿಜಿತ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 22:42 IST
Last Updated 25 ಜನವರಿ 2024, 22:42 IST
<div class="paragraphs"><p>ಇಂಗ್ಲೆಂಡ್‌ನ ನೈಜೆಲ್‌ ಶಾರ್ಟ್‌</p></div>

ಇಂಗ್ಲೆಂಡ್‌ನ ನೈಜೆಲ್‌ ಶಾರ್ಟ್‌

   

ಬೆಂಗಳೂರು: ತಮಿಳುನಾಡಿನ ಐಎಂ ಎಲ್‌.ಆರ್‌.ಶ್ರೀಹರಿ ಅವರು ಬೆಂಗಳೂರು ಇಂಟರ್‌ನ್ಯಾಷನಲ್ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಅಭಿಜಿತ್‌ ಗುಪ್ತಾ ಅವರಿಗೆ ಸೋಲಿನ ಆಘಾತ ನೀಡಿದ್ದು ‘ದಿನದ ಅನಿರೀಕ್ಷಿತ’ ಎನಿಸಿತು.

ಇನ್ನೊಂದೆಡೆ ರಾಷ್ಟ್ರೀಯ ಚಾಂಪಿಯನ್ ಎಸ್‌.ಪಿ.ಸೇತುರಾಮನ್ ಮೊದಲ ಬೋರ್ಡ್‌ನಲ್ಲಿ ಹಿರಿಯ ಗ್ರ್ಯಾಂಡ್‌ಮಾಸ್ಟರ್‌, ಇಂಗ್ಲೆಂಡ್‌ನ ನೈಜೆಲ್‌ ಶಾರ್ಟ್‌ ಅವರ ಜೊತೆ 33 ನಡೆಗಳಲ್ಲಿ ‘ಡ್ರಾ’ ಮಾಡಿಕೊಳ್ಳುವ ಮೂಲಕ ಒಂಟಿಯಾಗಿ ಅಗ್ರಸ್ಥಾನಕ್ಕೇರಿದರು.

ಎರಡನೇ ಶ್ರೇಯಾಂಕದ ಸೇತುರಾಮನ್ (ಪಿಎಸ್‌ಸಿಬಿ) 7.5 ಪಾಯಿಂಟ್ಸ್ ಗಳಿಸಿದ್ದಾರೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಚೆಸ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಕೊನೆಯ ಸುತ್ತಿನಲ್ಲಿ ಅವರು ಶುಕ್ರವಾರ ಜಿಎಂ ದೀಪ್ತಾಯನ್ ಘೋಷ್ (ಬಂಗಾಳ)  ಅವರನ್ನು ಎದುರಿಸಲಿದ್ದಾರೆ.

ಫಿಡೆಯಲ್ಲಿ ಚೆಸ್‌ ಅಭಿವೃದ್ಧಿ ವಿಭಾಗದ ನಿರ್ದೇಶಕರೂ ಆಗಿರುವ 58 ವರ್ಷದ ಶಾರ್ಟ್‌ ಮತ್ತು ಇತರ ನಾಲ್ವರು ಆಟಗಾರರು ತಲಾ ಏಳು ಪಾಯಿಂಟ್ಸ್ ಶೇಖರಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಎಲ್‌.ಆರ್‌.ಶ್ರೀಹರಿ, ಮಿತ್ರಬಾ ಗುಹಾ (ಬಂಗಾಳ), ದೀಪ್ತಾಯನ್‌ ಘೋಷ್‌ ಮತ್ತು ಎಂ. ಶ್ಯಾಮಸುಂದರ್ (ತಮಿಳುನಾಡು) ಎರಡನೇ ಸ್ಥಾನದಲ್ಲಿರುವ ಇತರ ನಾಲ್ವರು.

ಮೂರನೇ ಬೋರ್ಡ್‌ನಲ್ಲಿ ಮಿತ್ರಬಾ ಗುಹಾ ಮತ್ತು ಅರಣ್ಯಕ್ ಘೋಷ್ (6.5) ನಡುವಣ ಪಂದ್ಯ ಡ್ರಾ ಆಯಿತು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕೇರಳದ ನಿತಿನ್ ಬಾಬು (6), ದೀಪ್ತಾಯನ ಘೋಷ್ ಎದುರು ಸೋಲನುಭವಿಸಿದರು. ಕರ್ನಾಟಕದ ಜಿಎಂ ಪ್ರಣವ್ ಆನಂದ್ (6.5) ಮತ್ತು ಬಂಗಾಳದ ಜಿಎಂ ನೀಲೋತ್ಪಲ್ ದಾಸ್ (6.5) ನಡುವಣ ಪಂದ್ಯ ‘ಡ್ರಾ’ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.