ಕಿದಂಬಿ ಶ್ರೀಕಾಂತ್
–ಪಿಟಿಐ ಚಿತ್ರ
ಕ್ವಾಲಾಲಂಪುರ: ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಆರು ವರ್ಷಗಳಲ್ಲಿ ಇದೇ ಮೊದಲ ಬಾರಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಟೂರ್ನಿಯೊಂದರ ಫೈನಲ್ ತಲುಪಿದರು. ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಅವರು ಶನಿವಾರ ಜಪಾನಿನ ಯುಶಿ ತನಾಕ ಅವರನ್ನು ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
2021ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ವಿಜೇತ, 32 ವರ್ಷ ವಯಸ್ಸಿನ ಶ್ರೀಕಾಂತ್ ತಮ್ಮ ಉತ್ತುಂಗದ ದಿನಗಳನ್ನು ನೆನಪಿಸುವಂತೆ ಸೊಗಸಾದ ಆಟವಾಡಿ ವಿಶ್ವ ಕ್ರಮಾಂಕದಲ್ಲಿ 23ನೇ ಸ್ಥಾನದಲ್ಲಿರುವ ತನಾಕ ಅವರನ್ನು 21–18, 24–22 ರಿಂದ ಪರಾಭವಗೊಳಿಸಿದರು. ತಮ್ಮ ಚುರುಕಿನ ಚಲನೆ, ನಿಖರ ನೆಟ್ ಪ್ಲೇ, ಆಕ್ರಮಣದ ಆಟದಿಂದ ಶ್ರೀಕಾಂತ್ ಎದುರಾಳಿಯನ್ನು ಮಣಿಸಿದರು.
‘ನನಗೆ ಸಂತಸವಾಗಿದೆ. ಈ ಹಂತಕ್ಕೆ ಬರದೇ ತುಂಬಾ ದಿನಗಳಾಗಿದ್ದವು’ ಎಂದು ಶ್ರೀಕಾಂತ್ ಗೆಲುವಿನ ನಂತರ ಪ್ರತಿಕ್ರಿಯಿಸಿದರು. 2019ರ ಇಂಡಿಯಾ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ ಶ್ರೀಕಾಂತ್ ನಂತರ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದಾರೆ.
ಅವರು ಭಾನುವಾರ ನಡೆಯುವ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಚೀನಾ ಆಟಗಾರ ಲಿ ಶಿ ಅವರನ್ನು ಎದುರಿಸಲಿದ್ದಾರೆ. ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಲಿ ಶಿ ಇನ್ನೊಂದು ಸೆಮಿಫೈನಲ್‌ನಲ್ಲಿ 21–15, 21–15 ರಿಂದ ಜಪಾನಿನ ಕೊಡೈ ನರವೊಕಾ ಅವರನ್ನು ಸೋಲಿಸಿದರು.
ಈ ಹಿಂದೆ ಒಮ್ಮೆ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದ ಶ್ರೀಕಾಂತ್ ಇತ್ತೀಚಿನ ವರ್ಷಗಳಲ್ಲಿ ಫಾರ್ಮ್ ಮತ್ತು ಫಿಟ್ನೆಸ್ ಸಮಸ್ಯೆ ಎದುರಿಸಿ 65ನೇ ಸ್ಥಾನಕ್ಕೆ ಕುಸಿದಿದ್ದರು.
‘ದೈಹಿಕವಾಗಿ ಉತ್ತಮ ಕ್ಷಮತೆ ಹೊಂದಿದ್ದೇನೆ. ಆದರೆ ಕಳೆದ ವರ್ಷದಿಂದ ಹೆಚ್ಚು ಪಂದ್ಯಗಳಲ್ಲಿ ಆಡಿಲ್ಲ. ಹೀಗಾಗಿ ಮೊದಲಿನ ಸ್ಪರ್ಶ ಕಾಣಲು ಕಷ್ಟವಾಯಿತು. ಆದರೆ ಈ ಟೂರ್ನಿಯಲ್ಲಿ ಎಲ್ಲವೂ ಅಂದುಕೊಂಡ ಹಾಗೆ ಆಗಿದೆ’ ಎಂದು ಭಾರತದ ಆಟಗಾರ ಹೇಳಿದರು. 2017ರಲ್ಲಿ ಆಟದ ಉತ್ತುಂಗದಲ್ಲಿದ್ದ ಅವರು ಆ ವರ್ಷ ನಾಲ್ಕು ಬಿಡಬ್ಲ್ಯುಎಫ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದರು. ಆ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.