ಮಕಾವು: ಭಾರತದ ಕಿದಂಬಿ ಶ್ರೀಕಾಂತ್ ಅವರು ಮಕಾವು ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯೂ ಎಂಟರ ಘಟ್ಟಕ್ಕೆ ಮುನ್ನಡೆಯಿತು.
ಭಾರತದ ಆಟಗಾರರ ವ್ಯವಹಾರವಾಗಿದ್ದ 16ರ ಘಟ್ಟದ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಕಿದಂಬಿ ಅವರು 21-13, 21-18ರಿಂದ ಆಯುಷ್ ಶೆಟ್ಟಿ ಅವರನ್ನು ಸೋಲಿಸಿದರು.
2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ವಿಜೇತ 31 ವರ್ಷ ವಯಸ್ಸಿನ ಕಿದಂಬಿ, ಮೇನಲ್ಲಿ ಗಾಯಗೊಂಡು ಚೇತರಿಸಿಕೊಂಡ ಬಳಿಕ ಮೊದಲ ಬಾರಿ ಟೂರ್ನಿ ಆಡುತ್ತಿದ್ದಾರೆ. ಇಲ್ಲಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಣದಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿ ಅವರಾಗಿದ್ದಾರೆ.
ಮುಂದಿನ ಸುತ್ತಿನಲ್ಲಿ ಅವರು ಎರಡನೇ ಶ್ರೇಯಾಂಕದ ಆಂಗಸ್ ಲಾಂಗ್ (ಹಾಂಗ್‌ಕಾಂಗ್) ಅವರನ್ನು ಎದುರಿಸಲಿದ್ದಾರೆ. ಅವರೊಂದಿಗೆ ಎಂಟು ಮುಖಾಮುಖಿಯಲ್ಲಿ ಭಾರತದ ಆಟಗಾರ 4–4 ಗೆಲುವಿನ ದಾಖಲೆ ಹೊಂದಿದ್ದಾರೆ.
ಟ್ರೀಸಾ– ಗಾಯತ್ರಿ ಜೋಡಿಯು 22-20, 21-11ರಲ್ಲಿ ನೇರ ಗೇಮ್‌ಗಳಿಂದ ಚೀನಾ ತೈಪೆಯ ಲಿನ್ ಚಿಹ್ ಚುನ್ ಮತ್ತು ಟೆಂಗ್ ಚುನ್ ಹ್ಸುನ್ ಅವರನ್ನು ಹಿಮ್ಮೆಟ್ಟಿಸಿತು.
ಮಹಿಳೆಯರ ಸಿಂಗಲ್ಸ್‌ನಲ್ಲಿ ತಸ್ನಿಮ್ ಮಿರ್ 17-21, 21-13, 10-21ರಿಂದ ನಾಲ್ಕನೇ ಶ್ರೇಯಾಂಕದ ಜಪಾನ್‌ನ ಟೊಮೊಕಾ ಮಿಯಾಜಾಕಿ ವಿರುದ್ಧ ಮೂರು ಗೇಮ್‌ಗಳ ಹೋರಾಟ ನಡೆಸಿ ಪರಾಭವಗೊಂಡರು.
ಮಿಶ್ರ ಡಬಲ್ಸ್‌ನಲ್ಲಿ ಬಿ.ಸುಮೀತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ಅವರೂ ನಿರಾಸೆ ಮೂಡಿಸಿದರು. ಅವರು 17-21, 14-21ರಿಂದ ಮಲೇಷ್ಯಾದ ವಾಂಗ್ ಟಿಯೆನ್ ಸಿ ಮತ್ತು ಲಿಮ್ ಚಿವ್ ಸಿಯೆನ್ ಅವರಿಗೆ ಶರಣಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.