ADVERTISEMENT

ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್‌ಬಾಲ್ ಲೀಗ್‌: ಹೊಯ್ಸಳ, ಆರ್ಯನ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 16:02 IST
Last Updated 28 ಮಾರ್ಚ್ 2024, 16:02 IST
ಬ್ಯಾಸ್ಕೆಟ್‌ಬಾಲ್
ಬ್ಯಾಸ್ಕೆಟ್‌ಬಾಲ್   

ಬೆಂಗಳೂರು: ಪ್ರಭುರಾಜ್ ಮತ್ತು ಜಾಕೋಬ್‌ ಅವರ ಆಟದ ಬಲದಿಂದ ಹೊಯ್ಸಳ ಬಿ.ಸಿ ಹಾಸನ ತಂಡವು ಕರ್ನಾಟಕ ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್‌ಬಾಲ್ ಲೀಗ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 104–95ರಿಂದ ವಿಜಯನಗರ ಬಿಸಿ ಮೈಸೂರು ತಂಡವನ್ನು ಮಣಿಸಿತು.

ಇಲ್ಲಿನ ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪ್ರಭುರಾಜ್‌ ಮತ್ತು ಜಾಕೋಬ್‌ ಅವರು ಹೊಯ್ಸಳ ತಂಡದ ಪರ ಕ್ರಮವಾಗಿ 26 ಮತ್ತು 14 ಪಾಯಿಂಟ್ಸ್‌ ಗಳಿಸಿದರು. ವಿಜಯನಗರ ತಂಡದ ಪರ ವಿಕಾಸ್‌ 28 ಮತ್ತು ಭುವನ್‌ ಕುಮಾರ್ 26 ಅಂಕದೊಂದಿಗೆ ಗಮನ ಸೆಳೆದರು.

ರೈಸಿಂಗ್‌ ಸ್ಟಾರ್‌ ಬಿ.ಸಿ ಮೈಸೂರು ತಂಡವು 97–94ರಿಂದ ಮಲ್ಲಸಜ್ಜನ ಬಿ.ಸಿ ಧಾರವಾಡ ತಂಡವನ್ನು ಸೋಲಿಸಿತು. ಮಧ್ಯಂತರದ ವೇಳೆ 42–49ರಿಂದ ಹಿನ್ನಡೆಯಲ್ಲಿದ್ದ ರೈಸಿಂಗ್‌ ಸ್ಟಾರ್‌ ಉತ್ತರಾರ್ಧದಲ್ಲಿ ಚುರುಕಿನ ಆಟದ ಮೂಲಕ ಮೇಲುಗೈ ಸಾಧಿಸಿತು. ರೈಸಿಂಗ್‌ ಪರ ಅಮೋಘ್‌ ಮತ್ತು ಸನತ್‌ ಕ್ರಮವಾಗಿ 22, 15 ಪಾಯಿಂಟ್ಸ್‌ ಗಳಿಸಿದರು. ಮಲ್ಲಸಜ್ಜನ ತಂಡದ ಕೃತಿ 21 ಅಂಕ ತಂದಿತ್ತರು.

ADVERTISEMENT

ಮಂಗಳೂರು ಬಿ.ಸಿ ತಂಡವು 73–54ರಿಂದ ವಿ.ಬಿ.ಸಿ ಮಂಡ್ಯ ತಂಡವನ್ನು ಮಣಿಸಿತು. ಅಶ್ವಿಜ್‌ ಮತ್ತು ಶೈಲೆನ್ ಅವರು ಮಂಗಳೂರು ತಂಡಕ್ಕೆ ಕ್ರಮವಾಗಿ 21 ಮತ್ತು 15 ಅಂಕ ತಂದುಕೊಟ್ಟರು. ಮಂಡ್ಯ ತಂಡಕ್ಕೆ ಶಶಾಂಕ್‌ ರಾಜ್‌ 21, ಶಶಾಂಕ್‌ ಗೌಡ 17 ಪಾಯಿಂಟ್ಸ್‌ ಗಳಿಸಿದರು.

ಆರ್ಯನ್‌ ಬಿ.ಸಿ ಮೈಸೂರು ತಂಡವು 83–81ರಿಂದ ಪಿನಾಕಿನಿ ಬಿ.ಸಿ ಗೌರಿಬಿದನೂರು ತಂಡವನ್ನು ಸೋಲಿಸಿತು. ಆರ್ಯನ್‌ ತಂಡದ ಪರ ಶಕ್ತಿ 39, ಕ್ಷಿತಿಜ್ 28 ಅಂಕ ಗಳಿಸಿದರು. ಪಿನಾಕಿನಿ ತಂಡಕ್ಕೆ ರವಿಚಂದ್ರ 29 ಮತ್ತು ವೇಣುಗೋಪಾಲ್‌ 23 ಪಾಯಿಂಟ್ಸ್‌ ತಂದುಕೊಟ್ಟರು.

ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ವಿಜೇತರಾದ ತಂಡಗಳು ಶುಕ್ರವಾರ ಸೆಮಿಫೈನಲ್‌ ಸೂಪರ್‌ ಲೀಗ್‌ ಹಂತದಲ್ಲಿ ಸೆಣಸಲಿವೆ.

ಲೀಗ್‌ ಪಂದ್ಯದ ಫಲಿತಾಂಶ: ವಿಜಯನಗರ ಬಿ.ಸಿ. ಮೈಸೂರು 86–85ರಿಂದ ರೋವರ್ಸ್‌ ಬಿ.ಸಿ ಧಾರವಾಡ ತಂಡವನ್ನು; ಆರ್ಯನ್‌ ಬಿಸಿ ಮೈಸೂರು 51–35ರಿಂದ ಕನಕ ಬಿ.ಸಿ ಕೋಲಾರ ತಂಡವನ್ನು; ಮಲ್ಲಸಜ್ಜನ ಬಿಸಿ ಧಾರವಾಡ ತಂಡವು 79–72ರಿಂದ ದಾವಣಗೆರೆ ಬಿ.ಸಿ ತಂಡವನ್ನು ಮಣಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.