ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಏಳನೇ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಲ್ಲಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್ ಜಾವಲಿನ್ ಥ್ರೋ F64 ವಿಭಾಗದಲ್ಲಿ ಪ್ರಥಮ ಸ್ಥಾನ ಗೆದ್ದರು
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.-
ಬೆಂಗಳೂರು: ಪ್ಯಾರಾಲಿಂಪಿಯನ್ ಸುಮಿತ್ ಅಂಟಿಲ್ ಮತ್ತು ಗುಜರಾತ್‌ನ ಸಿ.ಎಸ್. ನಿಮಿಷಾ ಅವರು ಶುಕ್ರವಾರ ಇಲ್ಲಿ ಆರಂಭವಾದ 7ನೇ ಇಂಡಿಯನ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಪುರುಷರ ಜಾವೆಲಿನ್ ಥ್ರೋ (ಎಫ್12 ಹಾಗೂ ಎಫ್64) ಸ್ಪರ್ಧೆಯಲ್ಲಿ ಹರಿಯಾಣದ ಸುಮಿತ್ ಅವರು 72.25 ಮೀಟರ್ಸ್ ದೂರ ಎಸೆತದ ಸಾಧನೆ ಮಾಡಿದರು.
ರಸ್ತೆ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದ ಸುಮಿತ್ ಅವರು ಕೃತಕ ಕಾಲು ಅಳವಡಿಸಿಕೊಂಡಿದ್ದಾರೆ. 2020ರ ಟೋಕಿಯೊ ಮತ್ತು 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗಳಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು. ಹೋದ ವರ್ಷದ ವಿಶ್ವ ಪ್ಯಾರಾ ಗೇಮ್ಸ್‌ನಲ್ಲಿಯೂ ಚಿನ್ನದ ಸಾಧನೆ ಮಾಡಿದ್ದರು.
ಮಹಿಳೆಯರ ಲಾಂಗ್ ಜಂಪ್ (ಟಿ46 ಹಾಗೂ ಟಿ47) ಸ್ಪರ್ಧೆಯಲ್ಲಿ ಗುಜರಾತ್‌ನ ಸಿ.ಎಸ್. ನಿಮಿಷಾ 5.43 ಮೀಟರ್ಸ್ ದೂರ ಜಿಗಿದರು. ಅದರೊಂದಿಗೆ ಬಂಗಾರ ಪದಕ ತಮ್ಮದಾಗಿಸಿಕೊಂಡರು. ಪೋಲಿಯೊದಿಂದಾಗಿ ಅವರ ಒಂದು ಕೈ ಊನವಾಗಿರುವುದರಿಂದ ಈ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪುರುಷರ ವಿಭಾಗದ ಜಾವೆಲಿನ್‌ನಲ್ಲಿ ಹರಿಯಾಣದ ನವದೀಪ್ ಕುಮಾರ್ ಅವರು 42.63 ಮೀಟರ್ಸ್ ದೂರ ಸಾಧನೆ ಮಾಡಿ ಬಂಗಾರ ಗಳಿಸಿದರು. ಎಫ್40 ಮತ್ತು ಎಫ್41 ವಿಭಾಗ ಇದಾಗಿದ್ದು, ಕುಬ್ಜರು ಭಾಗವಹಿಸುತ್ತಾರೆ. ನವದೀಪ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಪದಕ ಜಯಿಸಿದ್ದರು.
ಕರ್ನಾಟಕಕ್ಕೆ ಎರಡು ಪದಕ: ಈ ಕೂಟದಲ್ಲಿ ಕರ್ನಾಟಕದ ಸ್ಪರ್ಧಿಗಳು ಎರಡು ಪದಕ ಜಯಿಸಿದರು. ಪುರುಷರ 1500 ಮೀ ಓಟ (ಟಿ11)ದಲ್ಲಿ ಕೇಶವಮೂರ್ತಿ ಕಾನಾಟಿಕೆ ಬೆಳ್ಳಿ ಪದಕ ಗಳಿಸಿದರು. ಅವರು 4 ನಿಮಿಷ, 44.60 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ವಿಭಾಗದಲ್ಲಿ ಛತ್ತೀಸಗಡದಲ್ಲಿ ಸುಖದೇವ್ ಮತ್ತು ಹರಿಯಾಣದ ಅಂಕುರ್ ಧರ್ಮಾ ಕರ್ಮವಾಗಿ ಚಿನ್ನ ಮತ್ತು ಕಂಚು ಗಳಿಸಿದರು.
ಮಹಿಳೆಯರ ವಿಭಾಗದ ಲಾಂಗ್ ಜಂಪ್ (ಟಿ20, ಟಿ37 ಮತ್ತು ಟಿ44) ವಿಭಾಗದಲ್ಲಿ ಕರ್ನಾಟಕದ ಹರ್ಷಿತಾ ಟೇಟರ್ ಅವರು ಬೆಳ್ಳಿ ಪದಕ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.