ADVERTISEMENT

Tokyo Olympics | 'ಸೂಪರ್' ಸಿಂಧು ಕ್ವಾರ್ಟರ್‌ಫೈನಲ್‌ಗೆ ಪ್ರವೇಶ

ಪಿಟಿಐ
Published 29 ಜುಲೈ 2021, 19:15 IST
Last Updated 29 ಜುಲೈ 2021, 19:15 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಟೋಕಿಯೊ: ಒಲಿಂಪಿಕ್ಸ್ ಚಿನ್ನದ ಕನಸು ನನಸಾಗಬೇಕಾದರೆ ಇನ್ನೂ ಮೂರು ಮೆಟ್ಟಿಲುಗಳನ್ನು ಏರುವ ಸವಾಲು ಪಿ.ವಿ. ಸಿಂಧು ಅವರ ಮುಂದಿದೆ.

ಗುರುವಾರ ಬೆಳಿಗ್ಗೆ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ 16 ರ ಘಟ್ಟದ ಪಂದ್ಯವನ್ನು ಗೆಲ್ಲುವುದರೊಂದಿಗೆ ಸಿಂಧು ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ತಾವು ಗೆದ್ದಿರುವ ಬೆಳ್ಳಿಪದಕಕ್ಕೆ ಬಂಗಾರದ ಮೆರುಗು ತುಂಬು ಛಲದೊಂದಿಗೆ ಅವರು ಇಲ್ಲಿ ಕಣಕ್ಕಿಳಿದಿದ್ದಾರೆ. ಇದುವರೆಗೂ ನಿರೀಕ್ಷೆಯಂತೆ ನಡೆದಿದೆ. ಜೆ ಗುಂಪಿನ್ ಮೊದಲ ಮತ್ತು ಎರಡನೇ ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿದ್ದ ಹೈದರಾಬಾದ್ ಹುಡುಗಿ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ 21–15, 21–13ರಿಂದ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ಎದುರು ಜಯಿಸಿದರು.

ADVERTISEMENT

ಕ್ರವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಆತಿಥೇಯ ಜಪಾನಿನ ಅಕಾನೆ ಯಾಮಗುಚಿ ವಿರುದ್ಧ ಸಿಂಧು ಕಣಕ್ಕಿಳಿಯುವರು.

16ರ ಘಟ್ಟದ ಪಂದ್ಯದಲ್ಲಿ ಉಭಯ ಆಟಗಾರ್ತಿಯರ ನಡುವೆ 41 ನಿಮಿಷಗಳ ಹೋರಾಟ ನಡೆಯಿತು. ಇದರಲ್ಲಿ ಬಹುತೇಕ ಸಮಯದಲ್ಲಿ ಸಿಂಧು ಅವರದ್ದೇ ಪಾರುಪತ್ಯ. ವಿಶ್ವ ಚಾಂಪಿಯನ್ ಸಿಂಧು ಉತ್ತಮ ಸ್ಟೋಕ್‌ಗಳನ್ನು ಪ್ರಯೋಗಿಸಿದರು. ನಿಖರವಾದ ಸರ್ವಿಸ್ ಮತ್ತು ಸ್ಮ್ಯಾಷ್‌ಗಳ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿದರು.

ರಿಟರ್ನ್ ಮತ್ತು ಡ್ರಾಪ್‌ನಲ್ಲಿ ಸಿಂಧು ಅವರ ಆಕ್ರಮಣಕಾರಿ ಛಾಪು ಗಮನ ಸೆಳೆಯಿತು.

ಮೊದಲ ಗೇಮ್‌ನಲ್ಲಿ ಡೆನ್ಮಾರ್ಕ್ ಆಟಗಾರ್ತಿ 2–0 ಮುನ್ನಡೆ ಪಡೆದಿದ್ದರು. ಆದರೆ, ತಿರುಗೇಟು ನೀಡಿದ ಸಿಂಧು 6–4ರಲ್ಲಿ ಮುನ್ನಡೆಗೆ ಬಂದರು. ಅಲ್ಪವಿರಾಮಕ್ಕೆ 11–6 ಲೀಡ್ ಪಡೆದಿದ್ದರು. ನಂತರದ ಆಟದಲ್ಲಿ ಮಿಯಾ, ಆರು ಪಾಯಿಂಟ್ಸ್‌ಗಳನ್ನು ಕಲೆಹಾಕಿ ಸಮಬಲ ಸಾಧಿಸುವ ಪ್ರಯತ್ನ ಮಾಡಿದರು. ಇದರಲ್ಲಿ ಸಿಂಧು ಎಸಗಿದ ಲೋಪಗಳೂ ಎದುರಾಳಿಗೆ ಪಾಯಿಂಟ್ಸ್‌ ನೀಡಿದವು.

ಆದರೆ ಸಿಂಧು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಚುರುಕಾದ ಆಟವಾಡಿದರು. ನೆಟ್‌ ಬಳಿಯ ಡ್ರಾಪ್‌ ಮಾಡುವ ಕೌಶಲವನ್ನು ಉತ್ತಗೊಳಿಸಿಕೊಂಡಿದ್ದು ಲಾಭವಾಯಿತು.

ಎರಡನೇ ಗೇಮ್‌ನಲ್ಲಿಯೂ ಸಿಂಧು ಚುರುಕಾದ ಆಟದೊಂದಿಗೆ ಸುಲಭ ಜಯ ಸಾಧಿಸಿದರು.

ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಭಾರತದ ಪಾಲಿಗೆ ಏಕೈಕ ಭರವಸೆಯಾಗಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸಾಯಿಪ್ರಣೀತ್, ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ–ಸಾತ್ವಿಕ್ ಸಾಯಿರಾಜ್ ಸೋತು ಹೊರಬಿದ್ದಿದ್ದಾರೆ.

ಯಾಮಗುಚಿ ಸವಾಲು

ಇನ್ನೊಂದು ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಆತಿಥೇಯ ದೇಶದ ಆಟಗಾರ್ತಿ ಅಕಾನೆ ಯಾಮಗುಚಿ 21–17, 21–18ರಿಂದ ಕೊರಿಯಾದ ಕಿಮ ಗೇನ್ ವಿರುದ್ಧ ಜಯಿಸಿದರು.

ಐದನೇ ಶ್ರೇಯಾಂಕದ ಅಕಾನೆ, ಸಿಂಧು ಎದುರು ಕಣಕ್ಕಿಳಿಯಲಿದ್ದಾರೆ. 24 ವರ್ಷದ ಯಾಮಗುಚಿ ವೇಗದ ಸ್ಮ್ಯಾಷ್‌ ಪ್ರಯೋಗಗಳಿಗೆ ಹೆಸರಾಗಿದ್ದಾರೆ. 2018ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಯಾಮಗುಚಿ ತಮ್ಮ ತವರಿನಲ್ಲಿ ಸಿಂಧುಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

ಹೋದ ಮಾರ್ಚ್‌ನಲ್ಲಿ ನಡೆದಿದ್ದ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ ಎಂಟರ ಘಟ್ಟದಲ್ಲಿ ಸಿಂಧು ಎದುರು ಯಾಮಗುಚಿ ಸೋತಿದ್ದರು.

ಗೇಮ್ ಸ್ಕೋರ್

ಸಿಂಧು; 21 ;21

ಮಿಯಾ; 15; 13

ಪಂದ್ಯ ನಡೆದ ಅವಧಿ : 41 ನಿಮಿಷ

––

ಕ್ವಾರ್ಟರ್‌ಫೈನಲ್ ಇಂದು

ಸಮಯ: ಮಧ್ಯಾಹ್ನ 12

ನೇರಪ್ರಸಾರ: ಸೋನಿ ಸ್ಪೋರ್ಟ್ಸ್

ಮುಖಾಮುಖಿ: 18

ಸಿಂಧು ಜಯ: 11

ಯಾಮಗುಚಿ ಜಯ; 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.