ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಭರವಸೆ ಮೂಡಿಸಿದ ಸೂರಜ್‌

ಪಿಟಿಐ
Published 19 ಸೆಪ್ಟೆಂಬರ್ 2025, 16:01 IST
Last Updated 19 ಸೆಪ್ಟೆಂಬರ್ 2025, 16:01 IST
ಸೂರಜ್‌ ವಶಿಷ್ಠ –ಎಕ್ಸ್ ಚಿತ್ರ
ಸೂರಜ್‌ ವಶಿಷ್ಠ –ಎಕ್ಸ್ ಚಿತ್ರ   

ಝಾಗ್ರೆಬ್‌ (ಕ್ರೊವೇಷ್ಯಾ): ಭಾರತದ ಯುವ ಕುಸ್ತಿಪಟು ಸೂರಜ್ ವಶಿಷ್ಠ ಅವರು ತಮ್ಮ ಚೊಚ್ಚಲ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿ ಭರವಸೆ ಮೂಡಿಸಿದರು. ಆದರೆ, ಅನುಭವಿ ಅಮನ್‌ ಮೊದಲ ಸುತ್ತು ದಾಟಲು ವಿಫಲವಾದರು. 

19 ವರ್ಷದ ಸೂರಜ್ ಪುರುಷರ 60 ಕೆಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ 3–1 ಅಂತರದಿಂದ ಏಂಜಲ್ ಟೆಲ್ಲೆಜ್ ವಿರುದ್ಧ ಜಯಗಳಿಸಿದರು. ನಂತರದ ಸುತ್ತಿನಲ್ಲೂ 3–1 ಅಂತರದಿಂದ ಮೊಲ್ಡೊವಾದ ವಿಕ್ಟರ್ ಸಿಯೋಬಾನು ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಆದರೆ, ಎಂಟರ ಘಟ್ಟದಲ್ಲಿ 1–4ರಿಂದ ಸರ್ಬಿಯಾದ ಜಾರ್ಜಿಜ್ ಟಿಬಿಲೋವ್ ವಿರುದ್ಧ ಪರಾಭವಗೊಂಡರು. 

ರೋಹ್ಟಕ್‌ನ ಸೂರಜ್‌ ಅವರು ಜುಲೈನಲ್ಲಿ ಬಿಷ್ಕೆಕ್‌ನಲ್ಲಿ ನಡೆದ 20 ವರ್ಷದೊಳಗಿನವರ ಏಷ್ಯನ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲ ಚಿನ್ನ ಗೆದ್ದಿದ್ದರು. ಅಲ್ಲದೆ, ಮಂಗೋಲಿಯಾ ಓಪನ್‌ನಲ್ಲಿ ಸೀನಿಯರ್‌ ಮಟ್ಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ADVERTISEMENT

77 ಕೆಜಿ ವಿಭಾಗದಲ್ಲಿ ಅಮನ್ ಅವರು ತನ್ನ ರೆಪೆಷಾಜ್ ಸುತ್ತಿನಲ್ಲಿ ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ ಉಕ್ರೇನ್‌ನ ಇಹೋರ್ ಬೈಚ್ಕೋವ್ ವಿರುದ್ಧ ಸೋತರು. 72 ಕೆ.ಜಿ ವಿಭಾಗದಲ್ಲಿ ಅಂಕಿತ್ ಗುಲಿಯಾ ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ ಕೊರಿಯಾದ ಯೊಂಗ್ಹುನ್ ನೋಹ್ ವಿರುದ್ಧ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. 

97 ಕೆ.ಜಿ ವಿಭಾಗದಲ್ಲಿ ನಿತೇಶ್ 3–2ರಿಂದ ಕ್ರೊವೇಷ್ಯಾದ ಫಿಲಿಪ್ ಸ್ಮೆಟ್ಕೊ ವಿರುದ್ಧ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದರು. ಆದರೆ, ಎರಡನೇ ಸುತ್ತಿನಲ್ಲಿ 0–4ರಿಂದ ವಿಶ್ವದ  ಅಗ್ರಮಾನ್ಯ ಕುಸ್ತಿಪಟು ಮೊಹಮ್ಮದದಿ ಸರವಿ (ಇರಾನ್‌) ವಿರುದ್ಧ ಸೋತರು.

ಗುರುವಾರ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್‌ ಪಂಘಲ್‌ ಕಂಚು ಗೆಲ್ಲುವ ಮೂಲಕ ಅವರು ಭಾರತಕ್ಕೆ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಪದಕ ತಂದುಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.