ADVERTISEMENT

ಸುಶೀಲ್ ಹಾದಿಗೆ ಕಲ್ಲು; ಅಮಿತ್‌ಗೆ ಒಲಿದ ಅದೃಷ್ಟ

ವಿಶ್ವ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ: ಸಂದೀಪ್‌ಗೆ ನಿರಾಸೆ; ಸೀಮಾ, ನಿಶಾ, ಪೂಜಾಗೆ ಅವಕಾಶ

ಪಿಟಿಐ
Published 22 ಏಪ್ರಿಲ್ 2021, 14:33 IST
Last Updated 22 ಏಪ್ರಿಲ್ 2021, 14:33 IST
ಸುಶೀಲ್ ಕುಮಾರ್ –ಪಿಟಿಐ ಚಿತ್ರ
ಸುಶೀಲ್ ಕುಮಾರ್ –ಪಿಟಿಐ ಚಿತ್ರ   

ನವದೆಹಲಿ: ಲಂಡನ್ ಮತ್ತು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ಅವರ ಟೋಕಿಯೊ ಒಲಿಂಪಿಕ್ ಕನಸು ಭಗ್ನಗೊಂಡಿದೆ. ಒಲಿಂಪಿಕ್ಸ್‌ ವಿಶ್ವ ಅರ್ಹತಾ ಟೂರ್ನಿಗಾಗಿ ಗುರುವಾರ ಪ್ರಕಟಿಸಿರುವ ರಾಷ್ಟ್ರೀಯ ತಂಡದಿಂದ ಅವರನ್ನು ಕೈಬಿಡಲಾಗಿದೆ.

74 ಕೆಜಿ ವಿಭಾಗದಲ್ಲಿ ಏಷ್ಯನ್ ಚಾಂಪಿಯನ್‌ ಅಮಿತ್‌ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ಸಂದೀಪ್‌ ಮನ್ ಬದಲಿಗೆ ಅಮಿತ್ ಧನಕಾರ್ ಹೆಸರು ಸೇರಿಸಲಾಗಿದೆ. ಬಲ್ಗೇರಿಯಾದ ಸೋಫಿಯಾದಲ್ಲಿ ಮೇ ಆರರಿಂದ ಒಂಬತ್ತರ ವರೆಗೆ ನಡೆಯಲಿರುವ ಟೂರ್ನಿ ಒಲಿಂಪಿಕ್ಸ್‌ ಅರ್ಹತೆಗೆ ಕೊನೆಯ ಅವಕಾಶವಾಗಿದೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ಬೀಜಿಂಗ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ತಂಡದಲ್ಲಿ ಸ್ಥಾನ ನೀಡದೇ ಇದ್ದುದಕ್ಕೆ ಪ್ರತಿಕ್ರಿಯಿಸಿರುವ ಸುಶೀಲ್‌ ‘ಭಾರತ ಕುಸ್ತಿ ಫೆಡರೇಷನ್ ಜೊತೆ ಈ ಕುರಿತು ಮಾತನಾಡುವೆ’ ಎಂದಿದ್ದಾರೆ.

ADVERTISEMENT

ಫ್ರೀಸ್ಟೈಲ್ ವಿಭಾಗದಲ್ಲಿ ಧನಕಾರ್ ಜೊತೆ ಸತ್ಯಾವರ್ತ್ ಕಡಿಯಾನ್ (97 ಕೆಜಿ) ಮತ್ತು ಸುಮಿತ್ (125) ಪಾಲ್ಗೊಳ್ಳಲಿದ್ದಾರೆ. ಗ್ರೀಕೊ ರೋಮನ್ ಶೈಲಿಯ ತಂಡಕ್ಕೆ ಸಚಿನ್ ರಾಣಾ (60 ಕೆಜಿ), ಆಶು (67 ಕೆಜಿ), ಗುರುಪ್ರೀತ್ ಸಿಂಗ್ (77 ಕೆಜಿ), ಸುನಿಲ್ (87 ಕೆಜಿ), ದೀಪಾಂಶು (97 ಕೆಜಿ) ಮತ್ತು ನವೀನ್‌ ಕುಮಾರ್‌ (130 ಕೆಜಿ) ಆಯ್ಕೆಯಾಗಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸೀಮಾ (50 ಕೆಜಿ) ನಿಶಾ (68 ಕೆಜಿ) ಮತ್ತು ಪೂಜಾ (76 ಕೆಜಿ) ಇದ್ದಾರೆ. ಆಯ್ಕೆ ಸಮಿತಿ ಸಭೆಯ ನಂತರ ಕುಸ್ತಿ ಫೆಡರೇಷನ್‌ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ‍ಪ್ರಕಟಣೆಯಲ್ಲಿ ತಂಡಗಳ ಮಾಹಿತಿ ನೀಡಿದ್ದಾರೆ.

’ಫ್ರೀಸ್ಟೈಲ್ ಶೈಲಿಯ 74 ಕೆಜಿ ವಿಭಾಗದಲ್ಲಿ ಬದಲಾವಣೆ ಮಾಡಲಾಗಿದೆ. ಸಂದೀಪ್ ಮನ್‌ ಏಷ್ಯನ್ ಅರ್ಹತಾ ಟೂರ್ನಿ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಿಲ್ಲ. ಮಾರ್ಚ್ 16ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಮಿತ್‌ ಧನಕಾರ್ ಎರಡನೇ ಸ್ಥಾನ ಗಳಿಸಿದ್ದಾರೆ. ಆದರೂ ಅವರಿಗೊಂದು ಅವಕಾಶ ನೀಡಲು ನಿರ್ಧರಿಸಲಾಗಿದೆ’ ಎಂದು ಫೆಡರೇಷನ್ ತಿಳಿಸಿದೆ.

‘ಗ್ರೀಕೊ ರೋಮನ್ ಶೈಲಿಯ ತಂಡದ 60 ಕೆಜಿ ಮತ್ತು 97 ಕೆಜಿ ವಿಭಾಗದಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಈ ವಿಭಾಗಗಳಲ್ಲಿ ಗ್ಯಾನೇಂದ್ರ ಮತ್ತು ರವಿ ಏಷ್ಯನ್ ಅರ್ಹತಾ ಟೂರ್ನಿ ಹಾಗೂ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ನೀರಸ ಸಾಮರ್ಥ್ಯ ತೋರಿದ್ದರು. ಹೀಗಾಗಿ ಸಚಿನ್ ಮತ್ತು ದೀಪಾಂಶು ಅವರಿಗೆ ಅವಕಾಶ ನೀಡಲಾಗಿದೆ. ಆಯ್ಕೆ ಟ್ರಯಲ್ಸ್‌ನಲ್ಲಿ ಇವರು ಎರಡನೇ ಸ್ಥಾನ ಗಳಿಸಿದ್ದರು’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.