ADVERTISEMENT

ತೃತೀಯ ಲಿಂಗಿಯಿಂದ ಪದಕ ಕಳೆದುಕೊಂಡೆ; ನಂದಿನಿ ವಿರುದ್ಧ ಸ್ವಪ್ನಾ ಬರ್ಮನ್‌ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2023, 11:06 IST
Last Updated 2 ಅಕ್ಟೋಬರ್ 2023, 11:06 IST
<div class="paragraphs"><p>ಸ್ವಪ್ನಾ ಬರ್ಮನ್</p></div>

ಸ್ವಪ್ನಾ ಬರ್ಮನ್

   

ಚಿತ್ರ: ( X/@Swapna_Barman96)

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಮಹಿಳೆಯರ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯುವಲ್ಲಿ ಭಾರತದ ಅಥ್ಲೀಟ್‌ ಸ್ವಪ್ನಾ ಬರ್ಮನ್ ವಿಫಲರಾಗಿದ್ದು, ‘ತೃತೀಯ ಲಿಂಗಿಯಿಂದ ಪದಕ ಕಳೆದುಕೊಂಡೆ’ ಎಂದು ಟ್ವೀಟ್‌ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ADVERTISEMENT

2018ರಲ್ಲಿ ಜಕರ್ತಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಸ್ವಪ್ನಾ ಅವರು ಚಿನ್ನ ಗೆದ್ದಿದ್ದರು. ಹಾಲಿ ಚಾಂಪಿಯನ್‌ ಆಗಿದ್ದ ಅವರಿಗೆ ಈ ಬಾರಿ ನಿರಾಸೆಯಾಗಿದೆ. ಭಾರತದ ನಂದಿನಿ ಅಗಸರ ಈ ಬಾರಿ ಕಂಚಿನ ಪದಕ ಗೆದ್ದಿದ್ದು, ಈ ಮೊದಲೇ ನಂದಿನಿ ಅವರ ಸ್ಪರ್ಧೆಯನ್ನು ವಿರೋಧಿಸಿದ್ದ ಸ್ವಪ್ನಾ, ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದ್ದರು.

‘ತೃತೀಯ ಲಿಂಗಿಯಿಂದ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ನಾನು ಕಂಚಿನ ಪದಕ ಕಳೆದುಕೊಳ್ಳುವಂತಾಯಿತು. ಇದು ಅಥ್ಲೆಟಿಕ್ಸ್ ನಿಯಮಗಳಿಗೆ ವಿರುದ್ಧವಾಗಿದೆ. ನಾನು ನನ್ನ ಪದಕವನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ನನಗೆ ಸಹಾಯ ಮಾಡಿ. ನನಗೆ ನಿಮ್ಮ ಬೆಂಬಲ ಬೇಕಿದೆ’ ಎಂದು ಟ್ವೀಟ್‌ ಮಾಡಿದ್ದರು.

ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತಿದ್ದಂತೆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

ನನಗೆ ಅನ್ಯಾಯವಾಗಿದೆ: ಸ್ವಪ್ನಾ

ಈ ಕುರಿತಂತೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸ್ಪಪ್ನಾ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ‘ನಂದಿನಿ ಸ್ಪರ್ಧೆ ಕುರಿತಂತೆ ಈ ಮೊದಲೇ ನಾನು ಪ್ರತಿಭಟಿಸಿದ್ದೆ. ಏಷ್ಯನ್‌ ಗೇಮ್ಸ್‌ ಪಟ್ಟಿಯಲ್ಲಿ ಅವರ ಹೆಸರು ಕಂಡು ನನಗೆ ಅಚ್ಚರಿಯಾಗಿತ್ತು. ಫೆಡರೇಷನ್ ಬಳಿ ಕೇಳಿದರೂ ನ್ಯಾಯ ಸಿಗಲಿಲ್ಲ’ ಎಂದರು

‘2.5ಕ್ಕಿಂತ ಹೆಚ್ಚು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿರುವ ತೃತೀಯ ಲಿಂಗಿ ಕ್ರೀಡಾಪಟುಗಳು ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಯಾವ ಹುಡುಗಿಯೂ ಹೆಪ್ಟಾಥ್ಲಾನ್‌ನಲ್ಲಿ ಅಷ್ಟು ಬೇಗ ಪದಕ ಗೆಲ್ಲಲು ಸಾಧ್ಯವಿಲ್ಲ. ನಾನು ಈ ವಿಭಾಗದಲ್ಲಿ 13 ವರ್ಷ ತರಬೇತಿ ಪಡೆದಿದ್ದೇನೆ. ಆದರೆ ಅವಳು(ನಂದಿನಿ) ನಾಲ್ಕು ತಿಂಗಳು ತರಬೇತಿ ಪಡೆದು ಈ ಮಟ್ಟಕ್ಕೆ ಬರುವುದು ಅಸಾಧ್ಯ’ ಎಂದು ಹೇಳಿದರು.

‘ಅಕ್ಟೋಬರ್ 6ಕ್ಕೆ ನಾವು ಹಾಂಗ್‌ಝೌನಿಂದ ತೆರಳಬೇಕಿತ್ತು. ಎಲ್ಲಿ ನನ್ನ ಆರೋಪವನ್ನು ಪರಿಗಣಿಸಿ ಪರೀಕ್ಷೆಗೆ ಒಳಪಡಿಸುತ್ತಾರೊ ಎಂಬ ಭಯದಲ್ಲಿ ತಾಯಿ ಅನಾರೋಗ್ಯ ಕಾರಣ ನೀಡಿ ನಂದಿನಿ ಇಲ್ಲಿಂದ ತೆರಳಿದ್ದಾರೆ. ಆಕೆಗೆ ಟಿಕೆಟ್‌ ಕೊಟ್ಟವರ್ಯಾರು?’ ಎಂದು ಪ್ರಶ್ನಿಸಿದ್ದಾರೆ.

ಸ್ವಪ್ನಾ ಬರ್ಮನ್‌ ಡಿಲೀಟ್‌ ಮಾಡಿದ ಟ್ವೀಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.