ADVERTISEMENT

ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಶ್ರೀಹರಿ

ಒಲಿಂಪಿಕ್ಸ್ ಅರ್ಹತಾ ಈಜು ಚಾಂಪಿಯನ್‌ಷಿಪ್‌: ಭಾರತಕ್ಕೆ ಒಟ್ಟು 29 ಪದಕ

ಪಿಟಿಐ
Published 18 ಏಪ್ರಿಲ್ 2021, 11:02 IST
Last Updated 18 ಏಪ್ರಿಲ್ 2021, 11:02 IST
ಚಿನ್ನದ ಪದಕಗಳೊಂದಿಗೆ ಶ್ರೀಹರಿ ನಟರಾಜ್‌– ಟ್ವಿಟರ್ ಚಿತ್ರ
ಚಿನ್ನದ ಪದಕಗಳೊಂದಿಗೆ ಶ್ರೀಹರಿ ನಟರಾಜ್‌– ಟ್ವಿಟರ್ ಚಿತ್ರ   

ತಾಷ್ಕೆಂಟ್‌: ಕರ್ನಾಟಕದ ಶ್ರೀಹರಿ ನಟರಾಜ್ ಅವರು ಇಲ್ಲಿ ಕೊನೆಗೊಂಡ ಒಲಿಂಪಿಕ್‌ ಅರ್ಹತಾ ಈಜು ಚಾಂಪಿಯನ್‌ಷಿಪ್‌ನ50 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಉಜ್ಬೆಕಿಸ್ತಾನ ಈಜು ಕೂಟದಲ್ಲಿ ಅವರ ಕೊರಳಿಗೇರಿದ ಎರಡನೇ ಚಿನ್ನ ಇದು.

20 ವರ್ಷದ ಶ್ರೀಹರಿ, ಶನಿವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ 25.11 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.ಶ್ರೀಹರಿ ಅವರು ಎರಡು ದಿನಗಳ ಅಂತರದಲ್ಲಿ ಮೂರನೇ ಬಾರಿ ರಾಷ್ಟ್ರೀಯ ದಾಖಲೆ ಬರೆದರು. ಈ ವಾರದ ಆರಂಭದಲ್ಲಿ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಅವರು ಎರಡು ಬಾರಿ ಈ ಸಾಧನೆ ಮಾಡಿದ್ದರು.

ಭಾರತದ ಸ್ಪರ್ಧಿಗಳು ಕೂಟದಲ್ಲಿ ಒಟ್ಟು 29 ಪದಕಗಳನ್ನು (18 ಚಿನ್ನ, ಏಳು ಬೆಳ್ಳಿ ಹಾಗೂ ನಾಲ್ಕು ಕಂಚು) ತಮ್ಮದಾಗಿಸಿಕೊಂಡರು.

ADVERTISEMENT

ಒಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸುವ ವಿಶ್ವಾಸದಲ್ಲಿರುವ ಇನ್ನೊಬ್ಬ ಈಜುಪಟು ಸಾಜನ್ ಪ್ರಕಾಶ್‌ ಕೂಡ ಅದ್ಭುತ ಸಾಮರ್ಥ್ಯ ತೋರಿದ್ದಾರೆ. ಕೇರಳದ ಸಾಜನ್‌, ಕೂಟದ ಕೊನೆಯ ದಿನ 100 ಮೀ, ಬಟರ್‌ಫ್ಲೈ ವಿಭಾಗದಲ್ಲಿ 53.69 ಸಕೆಂಡುಗಳಲ್ಲಿ ಗುರಿ ಮುಟ್ಟಿ ಅಗ್ರಸ್ಥಾನ ಗಳಿಸಿದರು.

ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಮಾನಾ ಪಟೇಲ್ ಹಾಗೂ ಕರ್ನಾಟಕದ ಸುವನಾ ಭಾಸ್ಕರ್‌ (30.28 ಸೆಕೆಂಡು, ವೈಯಕ್ತಿಕ ಶ್ರೇಷ್ಠ ಸಾಧನೆ) ಅವರಿಗೆ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳು ಒಲಿದವು.

ಭಾರತದ ಯಾವುದೇ ಈಜುಪಟು ಇದುವರೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ‘ಎ‘ ಅರ್ಹತೆ ಗಳಿಸಿಲ್ಲ. ಶ್ರೀಹರಿ, ಸಾಜನ್‌, ವೀರ್‌ಧವಳ್ ಖಾಡೆ, ಕುಶಾಗ್ರ ರಾವತ್‌, ಆರ್ಯನ್ ಮಖೀಜಾ ಹಾಗೂ ಅದ್ವೈತ್‌ ಪಾಗೆ ಅವರು ‘ಬಿ‘ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.