ಈಜು (ಸಾಂದರ್ಭಿಕ ಚಿತ್ರ)
ಅಹಮದಾಬಾದ್: ಕರ್ನಾಟಕದ ಈಜು ತಾರೆ ಶ್ರೀಹರಿ ನಟರಾಜ್ ಅವರು 11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಪದಕ ಜಯಿಸಿದರು. ಅವರು, ಕರ್ನಾಟಕದವರೇ ಆದ ಅನೀಶ್ ಗೌಡ, ಸಜನ್ ಪ್ರಕಾಶ್ ಹಾಗೂ ಶೋನ್ ಗಂಗೂಲಿ ಜೊತೆಗೂಡಿ 4x200 ಮೀ. ಫ್ರೀಸ್ಟೈಲ್‌ನಲ್ಲಿ ಸೋಮವಾರ ಬೆಳ್ಳಿ ಪದಕ ಜಯಿಸಿದರು.
ಅಂತಿಮ ಕ್ಷಣದಲ್ಲಿ ಶ್ರೀಹರಿ ಅವರು ತೋರಿದ ಮಿಂಚಿನ ಪ್ರದರ್ಶನದಿಂದಾಗಿ ಭಾರತ ತಂಡವು 7ನಿ., 23.38 ಸೆಕೆಂಡುಗಳಲ್ಲಿ ಗುರಿ ತಲುಪಿತು. ಮಲೇಷ್ಯಾ (7:23.43) ಕಂಚಿಗೆ ತೃಪ್ತಿಪಟ್ಟಿತು.
ಡೈವಿಂಗ್‌ನಲ್ಲಿ ಚಾರಿತ್ರಿಕ ಕಂಚು: ಮಣಿಪುರದ ಸಾಯಿರಾಮ್ ಮತ್ತು ವಿಲ್ಸನ್ ಸಿಂಗ್ ನಿಂಗ್‌ತೌಜಮ್ ಅವರು ಪುರುಷರ 10 ಮೀಟರ್ ‘ಸಿಂಕ್ರೊನೈಸ್ ಡೈವಿಂಗ್’ನಲ್ಲಿ ಚಾರಿತ್ರಿಕ ಕಂಚಿನ ಪದಕ ಗೆದ್ದರು.
ಡೈವಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಇದೇ ಮೊದಲ ಬಾರಿಗೆ ಪದಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಮುಂದಿನ ವರ್ಷ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೂ ಅರ್ಹತೆ ಪಡೆಯುವ ಹೊಸ್ತಿಲಲ್ಲಿದ್ದಾರೆ.
ಸಾಯಿರಾಮ್ ಮತ್ತು ವಿಲ್ಸನ್ ಅವರು 300.66 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಚೀನಾದ ಜಾಂಗ್ಯು ಕುಯಿ ಮತ್ತು ಜಾನ್‌ಹಾಂಗ್ ಕ್ಸು (381.75) ಮತ್ತು ಮಲೇಷ್ಯಾದ ಬರ್ಟ್ರಾಂಡ್ ರೋಡಿಕ್ಟ್ ಲಿಸೆಸ್ ಮತ್ತು ಎನ್ರಿಕ್ ಎಂ. ಹೆರಾಲ್ಡ್ (329.73) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
1,500 ಮೀಟರ್ ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್ ಹಾಗೂ 200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ರಿಷಭ್ ದಾಸ್ ಅವರು ಕಂಚು ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.