ADVERTISEMENT

ರಾಷ್ಟ್ರೀಯ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌: ಧೀನಿಧಿ ಕೂಟ ದಾಖಲೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 16:38 IST
Last Updated 18 ಜುಲೈ 2022, 16:38 IST
ಧೀನಿಧಿ ದೇಸಿಂಗು
ಧೀನಿಧಿ ದೇಸಿಂಗು   

ಬೆಂಗಳೂರು: ಕರ್ನಾಟಕದ ಧೀನಿಧಿ ದೇಸಿಂಗು ಅವರು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಸೋಮವಾರ ನಡೆದ ಬಾಲಕಿಯರ 12–14 ವರ್ಷದೊಳಗಿನವರ ವಿಭಾಗದ 100 ಮೀ. ಬಟರ್‌ಫ್ಲೈನಲ್ಲಿ ಅವರು 1 ನಿ. 4.01 ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಕರ್ನಾಟಕದವರೇ ಆದ ಹಷಿಕಾ ರಾಮಚಂದ್ರ (1:05.51) ಅವರು 2021 ರಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು. ಹಷಿಕಾ ಈ ಬಾರಿ ಎರಡನೇ ಸ್ಥಾನ ಪಡೆದರು.

ಎಸ್‌.ಎಸ್‌.ರುಜುಲಾ 800 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ 9 ನಿ. 36.82 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಜಯಿಸಿದರು. ಕರ್ನಾಟಕದವರೇ ಆದ ಮೀನಾಕ್ಷಿ ಮೆನನ್‌ (9 ನಿ. 38 ಸೆ.) ಎರಡನೇ ಸ್ಥಾನ ಪಡೆದುಕೊಂಡರು.

ADVERTISEMENT

ಇದೇ ವಯೋವರ್ಗದ ಬಾಲಕರ 400 ಮೀ. ಮೆಡ್ಲೆಯಲ್ಲಿ ಕರ್ನಾಟಕದ ಆರ್‌.ನವನೀತ್‌ ಗೌಡ 4 ನಿ. 53.33 ಸೆ.ಗಳೊಂದಿಗೆ ಮೊದಲ ಸ್ಥಾನ ಪಡೆದರು. ಬಾಲಕರ 100 ಮೀ. ಫ್ರೀಸ್ಟೈಲ್‌ನಲ್ಲಿ ಇಶಾನ್‌ ಮೆಹ್ರಾ 55.14 ಸೆ.ಗಳೊಂದಿಗೆ ಚಿನ್ನ ಗೆದ್ದರು.

ಬಾಲಕಿಯರ 15–17 ವರ್ಷದೊಳಗಿನ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ವೀರೇಂದ್ರಕುಮಾರ್‌ ಮೊದಲ ಸ್ಥಾನ ಗಳಿಸಿದರು. ಅವರು 30.25 ಸೆ.ಗಳಲ್ಲಿ ಗುರಿ ತಲುಪಿದರು. ಗೋವಾದ ಸಂಜನಾ ಪ್ರಭುಗಾಂವ್ಕರ್‌ ಬೆಳ್ಳಿ ಹಾಗೂ ಕರ್ನಾಟಕದ ಶಾಲಿನಿ ಆರ್‌.ದೀಕ್ಷಿತ್‌ ಕಂಚು ಜಯಿಸಿದರು.

ಬಾಲಕರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್ ಸಂತೋಷ್‌ ಪಾಟೀಲ್‌, 100 ಮೀ. ಫ್ರೀಸ್ಟೈಲ್‌ನಲ್ಲಿ ಕಾರ್ತಿಕೇಯನ್‌ ನಾಯರ್ ಮತ್ತು ಬಾಲಕಿಯರ 1,500 ಮೀ. ಫ್ರೀಸ್ಟೈಲ್‌ನಲ್ಲಿ ಶಿರಿನ್‌ ಬೆಳ್ಳಿಜಯಿಸಿದರೆ, ಬಾಲಕಿಯರ 100 ಮೀ. ಬಟರ್‌ಫ್ಲೈನಲ್ಲಿ ನೀನಾ ವೆಂಕಟೇಶ್‌ ಕಂಚು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.