ADVERTISEMENT

ಈಜು ಕ್ರೀಡೆ: ಸೌಕರ್ಯದಲ್ಲಿ ಪ್ರಗತಿ–ಸಾಧನೆ ಶೂನ್ಯ

ಕೆ.ಓಂಕಾರ ಮೂರ್ತಿ
Published 5 ಜುಲೈ 2021, 3:56 IST
Last Updated 5 ಜುಲೈ 2021, 3:56 IST
ಮೈಸೂರಿನಲ್ಲಿರುವ ಕ್ರೀಡಾ ಇಲಾಖೆಯ ಈಜುಕೊಳ
ಮೈಸೂರಿನಲ್ಲಿರುವ ಕ್ರೀಡಾ ಇಲಾಖೆಯ ಈಜುಕೊಳ   

ಮೈಸೂರು: ಬೆಂಗಳೂರು ಬಳಿಕ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವ ಮೈಸೂರು ನಗರಿಯಲ್ಲಿ ನಿಧಾನವಾಗಿ ಕ್ರೀಡಾ ಸೌಕರ್ಯಗಳಲ್ಲಿ ಪ್ರಗತಿಯಾಗುತ್ತಿದೆ. ಬಹುತೇಕ ಸ್ಪರ್ಧೆಗಳಲ್ಲಿ ‌ಕ್ರೀಡಾಪಟುಗಳು ತಮ್ಮ ಪ್ರತಿಭೆ ತೋರುತ್ತಿದ್ದರಾದರೂ ಈಜು ವಿಚಾರದಲ್ಲಿ ಮಾತ್ರ ಶೂನ್ಯ ಸಾಧನೆ.

ಮೈಸೂರು ಮಾತ್ರವಲ್ಲ; ಹಾಸನ, ಮಂಡ್ಯ, ಕೊಡಗು, ಚಾಮರಾಜನಗರ ಭಾಗದಲ್ಲೂ ಸ್ಪರ್ಧಾತ್ಮಕ ಈಜುಪಟುಗಳು ಕಾಣಿಸಿಕೊಳ್ಳುತ್ತಿಲ್ಲ. ಉಳಿದ ಕ್ರೀಡೆಗಳಿಗೆ ಸಂಬಂಧಿಸಿದಂತೆ ಉತ್ತಮ ಕ್ರೀಡಾಂಗಣಗಳಿವೆ, ಮಾರ್ಗದರ್ಶಕರೂ ಇದ್ದಾರೆ. ಅದೇ ವಿಚಾರವನ್ನು ಈಜು ಕ್ರೀಡೆಯಲ್ಲಿ ಹೇಳಲಾಗದು. ಈಜು ಕ್ಲಬ್‌ಗಳೂ ಇಲ್ಲಿಲ್ಲ. ಕೋಚ್‌ಗಳಿಗೂ ಕೊರತೆ ಇದೆ.

ಮೈಸೂರಿನಲ್ಲಿ ಸದ್ಯಕ್ಕೆ ಸಾರ್ವಜನಿಕರಿಗೆ ಲಭ್ಯವಾಗುವಂಥ ಮೂರು ಈಜುಕೊಳಗಳಿವೆ. ನಿರ್ವಹಣೆ, ತರಬೇತಿ ಸೌಲಭ್ಯ ಪರವಾಗಿಲ್ಲ. ಕ್ರೀಡಾ ಇಲಾಖೆ ವತಿಯಿಂದ ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಿಸಲಾಗಿದೆ. ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ.

ADVERTISEMENT

ಇನ್ನೊಂದು ಈಜುಕೊಳ ಮೈಸೂರು ವಿಶ್ವವಿದ್ಯಾಲಯದ್ದು. ಇಲ್ಲಿ ಕೋಚ್‌ ಹಾಗೂ ಸಹಾಯಕರು ಇದ್ದಾರೆ. ಮತ್ತೊಂದು ಈಜುಕೊಳ ಜೆ.ಪಿ.ನಗರದಲ್ಲಿರುವ ಪಂಡಿತ ಪುಟ್ಟರಾಜು ಗವಾಯಿ ಕ್ರೀಡಾ ಸಂಕೀರ್ಣದಲ್ಲಿದೆ. ಪಾಲಿಕೆಯು ಇದರ ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ನೀಡಿದೆ. ಹೀಗಾಗಿ, ಸಾರ್ವಜನಿಕರಿಗೆ ಹಾಗೂ ಸ್ಪರ್ಧಿಗಳಿಗೆ ಸುಲಭವಾಗಿ ಪ್ರವೇಶ ಸಿಗುತ್ತಿಲ್ಲ. ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತದೆ. ಇನ್ನು ಕ್ಲಬ್‌ಗಳು, ರೆಸಾರ್ಟ್‌ಗಳು, ಸ್ಟಾರ್‌ ಹೋಟೆಲ್‌ಗಳಲ್ಲಿ ಈಜುಕೊಳಗಳಿದ್ದು, ಮೋಜಿಗಾಗಿ ನಿರ್ಮಿಸಿಕೊಂಡಿರುವಂಥವು ಅಷ್ಟೆ.

ಇದನ್ನೂ ಓದಿ: ಆಳ-ಅಗಲ: ನಗರಗಳಲ್ಲಿ ಕೊರತೆ ಇಲ್ಲ, ಗ್ರಾಮಗಳಲ್ಲಿ ಏನೂ ಇಲ್ಲ | Prajavani

‘ಮೈಸೂರಿನಲ್ಲಿ ಇರುವ ಪ್ರಮಾಣೀಕೃತ ಈಜು ಕೋಚ್‌ಗಳ ಸಂಖ್ಯೆ ಕೇವಲ ಮೂರು. ಕ್ರೀಡಾ ಇಲಾಖೆಯಿಂದ ಜಿಲ್ಲೆಗೆ ಕೋಚ್‌ ನೇಮಿಸಿಲ್ಲ. ಹೀಗಾಗಿ, ಇಲ್ಲಿನ ಮಕ್ಕಳು ಇತಿಮಿತಿಯಲ್ಲಿ ಈಜು ಕಲಿಯಬೇಕಿದೆ’ ಎಂದು ಕರ್ನಾಟಕ ಈಜು ಸಂಸ್ಥೆ ಪದಾಧಿಕಾರಿ ಹಾಗೂ ಕೋಚ್‌ ಸುಂದರೇಶನ್‌ ಹೇಳುತ್ತಾರೆ.

ಮೈಸೂರು ಭಾಗದ ಈಜುಪಟುಗಳು ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ಮೈಸೂರಿನ ತೇಜಸ್‌ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಕೆ.ಕೆ.ಕೀರ್ತನಾ, ವಿಭಾಗಮಟ್ಟದಲ್ಲಿ ಸಂಜಯ್‌, ತಾನ್ಯಾ ಉತ್ತಮ ಪ್ರದರ್ಶನ ನೀಡಿದ್ದಾರೆ.

ಚಾಮರಾಜನಗರದಲ್ಲಿ ಒಂದೂ ಈಜುಕೊಳ ಇಲ್ಲ. ಹಾಸನದಲ್ಲಿ ಎರಡು ಈಜುಕೊಳಗಳಿದ್ದು, ನಿರ್ವಹಣೆ ಅಷ್ಟಕಷ್ಟೆ. ಮಂಡ್ಯದಲ್ಲೂ ಪಿಇಟಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಖಾಸಗಿ ಈಜುಕೊಳವಿದೆ. ಉಳಿದೆಲ್ಲಾ ಕ್ರೀಡೆಗಳಲ್ಲಿ ಮಿಂಚುವ ಕೊಡಗು ಜಿಲ್ಲೆ ಈಜು ವಿಚಾರದಲ್ಲಿ ಮಾತ್ರ ಹಿಂದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳವಿದೆ. ಇಬ್ಬರು ತರಬೇತುದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.