
ನವದೆಹಲಿ: ಅನುಭವಿ ಆಲ್‌ರೌಂಡರ್ ಅಜ್ಮತ್‌ವುಲ್ಲಾ ಒಮರ್‌ಝೈ (15ಕ್ಕೆ4 ಮತ್ತು ಔಟಾಗದೇ 40;21ಎ) ಅವರ ಅಮೋಘ ಆಟದ ನೆರವಿನಿಂದ ಅಫ್ಗಾನಿಸ್ತಾನ ತಂಡವು ಟಿ20 ವಿಶ್ವಕಪ್‌ನಲ್ಲಿ ಮೊದಲ ಜಯ ದಾಖಲಿಸಿತು. ಇದರಿಂದಾಗಿ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಲು ಅಫ್ಗಾನಿಸ್ತಾನಕ್ಕೆ ಇನ್ನೂ ಒಂದು ಸಣ್ಣ ಅವಕಾಶ ಇದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ಐದು ವಿಕೆಟ್‌ಗಳಿಂದ ಯುಎಇ ತಂಡವನ್ನು ಮಣಿಸಿತು. ಸತತ ಎರಡು ಪಂದ್ಯಗಳನ್ನು ಸೋತಿದ್ದ ಅಫ್ಗನ್ ಗೆಲುವಿನ ಹಳಿಗೆ ಮರಳಿತು. ಡಿ ಗುಂಪಿನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ (6 ಅಂಕ) ತಂಡವು ಈಗಾಗಲೇ ಸೂಪರ್ 8ರ ಸುತ್ತಿಗೆ ಮುನ್ನಡೆದಿದೆ. ಉಳಿದ ಒಂದು ಸ್ಥಾನಕ್ಕಾಗಿ ನ್ಯೂಜಿಲೆಂಡ್ (4), ಅಫ್ಗನ್ (2) ಮತ್ತು ಯುಎಇ (2) ತಂಡಗಳ ನಡುವೆ ಪೈಪೋಟಿಯಿದೆ. ಒಂದೊಮ್ಮೆ ನ್ಯೂಜಿಲೆಂಡ್ ತಂಡವು ಗುಂಪು ಹಂತದಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಕೆನಡಾ ಎದುರು ಸೋತು, ಅಫ್ಗನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ (ಕೆನಡಾ ಎದುರು) ಗೆದ್ದರೆ ರನ್‌ರೇಟ್ ಲೆಕ್ಕಾಚಾರದಲ್ಲಿ ಸೂಪರ್ 8 ಪ್ರವೇಶಿಸುವ ಅವಕಾಶ ಇದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಯುಎಇ ತಂಡವನ್ನು ಒಮರ್‌ಝೈ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಲು ನೆರವಾದರು. ಸೊಹೇಬ್ ಖಾನ್ (68;48ಎ, 4x6, 6x4) ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 160 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಅಫ್ಗನ್ ತಂಡವು ನಾಲ್ಕು ಎಸೆತಗಳು ಬಾಕಿ ಇರುವಂತೆ 5 ವಿಕೆಟ್‌ಗೆ 162 ರನ್ ಗಳಿಸಿ ಸಂಭ್ರಮಿಸಿತು. ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ (53;41ಎ, 4x6, 6x1) ಮತ್ತು ಒಮರ್‌ಝೈ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.
13 ರನ್‌ಗಳಿಗೆ ಆರಂಭಿಕ ಬ್ಯಾಟರ್‌ಗಳನ್ನು ಕಳೆದುಕೊಂಡ ಯುಎಇ ತಂಡಕ್ಕೆ ಅಲಿಶಾನ್ ಶರಾಫು (40;31ಎ) ಮತ್ತು ಸೊಹೇಬ್ ಚೇತರಿಕೆ ನೀಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಅವರು 84 ರನ್ ಸೇರಿಸಿದರು. ನಂತರದಲ್ಲಿ ನಿಯಮಿತವಾಗಿ ವಿಕೆಟ್‌ಗಳು ಪತನವಾದವು. ಆದರೆ ಮತ್ತೊಂದೆಡೆ ಎಚ್ಚರಿಕೆಯ ಆಟವಾಡಿದ ಸೋಹೆಬ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಅಫ್ಗನ್ ತಂಡವು ಅನುಭವಿ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ನಂತರದಲ್ಲಿ ಜದ್ರಾನ್ ಅವರು ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು. ಆದರೆ, 97 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತಂಡವು ಸಂಕಷ್ಟದಲ್ಲಿದ್ದಾಗ ದರ್ವೀಶ್ ರಸೂಲಿ (33;23ಎ) ಮತ್ತು ಒಮರ್‌ಝೈ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ ಅಮೂಲ್ಯ 43 (26ಎ) ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಸಂಕ್ಷಿಪ್ತ ಸ್ಕೋರ್: ಯುಎಇ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 160 (ಅಲಿಶಾನ್ ಶರಾಫು 40, ಸೊಹೇಬ್ ಖಾನ್ 68; ಅಜ್ಮತ್‌ವುಲ್ಲಾ ಒಮರ್‌ಝೈ 15ಕ್ಕೆ 4, ಮುಜೀಬ್ ಉರ್ ರಹಮಾನ್ 31ಕ್ಕೆ 2). ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 (ಇಬ್ರಾಹಿಂ ಜದ್ರಾನ್ 53, ದರ್ವೀಶ್ ರಸೂಲಿ 33, ಒಮರ್‌ಝೈ ಔಟಾಗದೇ 40; ಜುನೈದ್ ಸಿದ್ದೀಕ್ 23ಕ್ಕೆ 2, ಮೊಹಮ್ಮದ್ ಅರ್ಫಾನ್ 30ಕ್ಕೆ 2). ಪಂದ್ಯದ ಆಟಗಾರ: ಅಜ್ಮತ್‌ವುಲ್ಲಾ ಒಮರ್‌ಝೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.