
ವಿಯ್ನ್ ಆನ್ ಝೀ (ನೆದರ್ಲೆಂಡ್ಸ್): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಟಾಟಾ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಕೊನೆಗೂ ಜಯ ದಾಖಲಿಸಿದರು. ಸತತ ನಾಲ್ಕು ಡ್ರಾಗಳ ನಂತರ ಬುಧವಾರ ನಡೆದ ಐದನೇ ಸುತ್ತಿನಲ್ಲಿ ಭಾರತದ ಆಟಗಾರ, ಝೆಕ್ ರಿಪಬ್ಲಿಕ್‌ನ ಥಾಯ್ ದೈ ವಾನ್ ನೂಯೆನ್ ಅವರನ್ನು ಸೋಲಿಸಿದರು.
ಅರ್ಜುನ್ ಇರಿಗೇಶಿ ಅವರಿಗೆ ಸ್ಲೊವೇನಿಯಾದ ವ್ಲಾದಿಮಿರ್ ಫೆಡೊಸೀವ್ ಸೋಲಿನ ಆಘಾತ ನೀಡಿದರು. ಗುರುವಾರ ಟೂರ್ನಿಗೆ ವಿರಾಮದ ದಿನವಾಗಿತ್ತು. ಗುಕೇಶ್ ಮತ್ತು ಫೆಡೊಸೀವ್ ತಲಾ 3 ಅಂಕ ಗಳಿಸಿದ್ದಾರೆ. ಅರ್ಜುನ್ 2.5 ಅಂಕ ಸಂಗ್ರಹಿಸಿದ್ದಾರೆ.
ಅಮೆರಿಕದ ಹ್ಯಾನ್ಸ್ ನೀಮನ್, ಉಜ್ಬೇಕಿಸ್ತಾನದ ಜಾವೊಕಿರ್ ಸಿಂದರೋವ್ ಮತ್ತು ಉಜ್ಬೇಕಿಸ್ತಾನದ ಸತ್ತಾರೋವ್ ಅವರು ತಲಾ 3.5 ಅಂಕ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ.
ಆರ್.ಪ್ರಜ್ಞಾನಂದ (1.5) ಅವರು ಡಚ್ ಗ್ರ್ಯಾನ್‌ಮಾಸ್ಟರ್ ಅನಿಶ್ ಗಿರಿ (1.5) ಎದುರು ಡ್ರಾ ಮಾಡಿಕೊಂಡರು. ಅರವಿಂದ ಚಿದಂಬರಮ್ ಅವರು ಜರ್ಮನಿಯ ವಿನ್ಸೆಂಟ್ ಕೀಮರ್ (2.5) ಅವರಿಗೆ ಸೋತರು.
ವಿಶ್ವಕಪ್ ವಿಜೇತ ಸಿಂದರೋವ್, ಟರ್ಕಿಯ ಯುವ ಆಟಗಾರ ಯಾಗಿಝ್ ಕಾನ್ ಎರ್ಡೋಗ್ಮಸ್ (2) ಅವರನ್ನು ಪ್ರಯಾಸದಿಂದ ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.