ADVERTISEMENT

ಕ್ರಾಸ್ ಕಂಟ್ರಿ ಸ್ಪರ್ಧಾ ಚಾಂಪಿಯನ್ ತೇಜಸ್ವಿನಿ

ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯ, ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಹದಾಸೆ

ಸಿ.ಎಸ್.ಸುರೇಶ್
Published 18 ಫೆಬ್ರುವರಿ 2026, 4:30 IST
Last Updated 18 ಫೆಬ್ರುವರಿ 2026, 4:30 IST
ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ತೇಜಸ್ವಿನಿ
ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ತೇಜಸ್ವಿನಿ   

ನಾಪೋಕ್ಲು: ಮೂರು ವರ್ಷಗಳ ಹಿಂದಿನ ಮಾತು. ಹುಬ್ಬಳ್ಳಿಯಲ್ಲಿ ನಡೆದ 58ನೇ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನದಿಂದ ವಂಚಿತರಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಈಕೆಗೆ ಸಾಧಿಸುವ ಛಲ.

ನಂತರದ ವರ್ಷ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಮಹಿಳಾ ವಿಭಾಗದ 10 ಕಿ.ಮೀ ಓಟದಲ್ಲಿ ಇವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. 10 ಕಿ.ಮೀ ಅಂತರವನ್ನು ಇವರು 38.02ನಿಮಿಷದಲ್ಲಿ ಗುರಿ ತಲುಪಿದರು.

2025ರಲ್ಲಿ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಮಹಿಳಾ ವಿಭಾಗದ 10 ಕಿ.ಮೀ ಓಟದಲ್ಲಿ ಮತ್ತೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇವರು ಕೊಡಗು ಜಿಲ್ಲೆಯ ಭಾಗಮಂಡಲದ ತೇಜಸ್ವಿನಿ. ಕೊಡಗಿನ ಹೆಮ್ಮೆಯ ಕ್ರಾಸ್ ಕಂಟ್ರಿ ಓಟಗಾರ್ತಿ.

ADVERTISEMENT

ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಭಿವೃದ್ಧಿ ಮಂಡಳಿಯಲ್ಲಿ ತರಬೇತಿ ಪಡೆಯುತ್ತಿದ್ದು, ವಿವಿಧ ಓಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದಾರೆ. ಹಲವು ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಹಸ್ಪರ್ಧಿಗಳನ್ನು ಹಿಂದಿಕ್ಕಿ ಇವರು ಕೊರಳೊಡ್ಡಿದ ಪದಕಗಳು ಹಲವು.

ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಮಹಿಳಾ ವಿಭಾಗದ 10 ಕಿ.ಮೀ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದ ತೇಜಸ್ವಿನಿ

ಜಾರ್ಖಂಡ್‌ನಲ್ಲಿ ನಡೆದ 2026ರ ಸಾಲಿನ 60ನೇ ಮುಕ್ತ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಇವರು 6ನೇ ಸ್ಥಾನವನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯರ ಅಥ್ಲೆಟಿಕ್ಸ್ ಕೂಟದಲ್ಲಿ 10 ಸಾವಿರ ಮೀ. ಹಾಗೂ 5 ಸಾವಿರ ಮೀ.ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಟಿಸಿಎಸ್ ವರ್ಡ್ ಬೆಂಗಳೂರು ಪೊಲೀಸ್ ಓಟ-2024ರಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಬೆಂಗಳೂರಿನಲ್ಲಿ 2024ರಲ್ಲಿ ವಿಪ್ರೋ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಹಾಫ್ ಮೆರಥಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ, 59ನೇ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಓಟದಲ್ಲಿ ಚಿನ್ನದ ಪದಕ, ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ, 2025ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿ ಕೊಂಡಿದ್ದಾರೆ. ಹತ್ತು ಹಲವು ಪೊಲೀಸ್ ಕ್ರೀಡಾಕೂಟಗಳಲ್ಲಿ ಪ್ರಶಸ್ತಿಗಳು ಇವರ ಮುಡಿಗೇರಿವೆ.

ಪದವಿ ಶಿಕ್ಷಣದ ಅವಧಿಯಲ್ಲಿ ಕ್ರೀಡೆಯ ಬಗ್ಗೆ ಒಲವು ಹೊಂದಿದ್ದ ಇವರು ಕಾಲೇಜು ವಾರ್ಷಿಕ ಕ್ರೀಡಾಕೂಟ 800 ಮೀಟರ್ ಓಟದಲ್ಲಿ ಪದಕ ಗಳಿಸಿದ್ದರು. ಡಿಗ್ರಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ, ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ.

ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕವನ್ನು ಗೆದ್ದು ಇಲಾಖೆಗೆ ಗೌರವ ತಂದುಕೊಡಬೇಕು.
ಎನ್.ಎಲ್.ತೇಜಸ್ವಿನಿ, ಕ್ರಾಸ್ ಕಂಟ್ರಿ ಚಾಂಪಿಯನ್

‘2018ರಲ್ಲಿ ಪೊಲೀಸ್ ಇಲಾಖೆಗೆ ಸೇರಿಕೊಂಡರು. 2020ರಲ್ಲಿ ಪೊಲೀಸ್ ತರಬೇತಿಯನ್ನು ಮುಗಿಸಿ ಹುಳಿಮಾವು ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ, ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದಲ್ಲಿ 2021 ಬೆಂಗಳೂರು ನಗರ ವಾರ್ಷಿಕ ಕ್ರೀಡಾಕೂಟದಲ್ಲಿ ಚಾಂಪಿಯನ್ ಆದ ನಂತರ ಕ್ರೀಡೆಯ ಮೇಲೆ ಅತ್ಯಂತ ಆಸಕ್ತಿ ಮೂಡಿತು. ಕರ್ನಾಟಕ ರಾಜ್ಯ ಕ್ರೀಡಾಭಿವೃದ್ಧಿ ಮಂಡಳಿಯಲ್ಲಿ 5 ವರ್ಷದಿಂದ ತರಬೇತಿ ಪಡೆಯುತ್ತಿದ್ದು, ಇವರ ಕ್ರೀಡಾ ಬದುಕಿನ ಆಯಾಮ, ದೃಷ್ಟಿಕೋನ ಬದಲಾಯಿತು. ಹಲವು ಚಿನ್ನದ ಪದಕ ಗೆದ್ದಿರುವ ಇವರು ಒಲಂಪಿಕ್ಸ್‌ನಲ್ಲಿ ಪದಕ ಗಳಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

‘ಬೆಂಗಳೂರಿಗೆ ಬಂದ ನಂತರ ರಮಿತ್ ಆರ್ ಸಿಂಧ್ಯಾ ಎಂಬ ಉತ್ತಮ ತರಬೇತುದಾರ ದೊರಕಿದ್ದು, ಅವರ ಮಾರ್ಗದರ್ಶನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕವನ್ನು ಗೆದ್ದು ಇಲಾಖೆಗೆ ಗೌರವ ತಂದುಕೊಡಬೇಕು ಎಂಬ ಗುರಿಯನ್ನು ಹೊಂದಿದ್ದೇನೆ’ ಎಂದು ಹೇಳುತ್ತಾರೆ ತೇಜಸ್ವಿನಿ.

ತೇಜಸ್ವಿನಿ ಭಾಗಮಂಡಲ ಬಳಿಯ ಕೋರಂಗಾಲ ಗ್ರಾಮದ ಎನ್.ಪಿ.ಲೋಕನಾಥ ಮತ್ತು ಬಿ.ಜಿ.ಮೀನಾ ಕುಮಾರಿ  ದಂಪತಿಯ ಪುತ್ರಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು  ಜಿಎಚ್‌ಪಿ ಸ್ಕೂಲ್ ಕೋರಂಗಾಲ ಹಾಗೂ ಪ್ರೌಢಶಿಕ್ಷಣವನ್ನು ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಭಾಗಮಂಡಲದಲ್ಲಿ ಮುಗಿಸಿದ್ದು. ಪಿಯು ಶಿಕ್ಷಣವನ್ನು ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು, ಪಿರಿಯಾಪಟ್ಟಣದಲ್ಲಿ ಮುಗಿಸಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಟ್ರೋಫಿಯೊಂದಿಗೆ ತೇಜಸ್ವಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.