ಪ್ಯಾರಿಸ್: ಪ್ರಶಸ್ತಿಗೆ ನೆಚ್ಚಿನ ಆಟಗಾರ, ಎರಡನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರು ಬುಧವಾರ ನಡೆದ ಪಂದ್ಯದಲ್ಲಿ ಕೆಲಕಾಲ ಪರದಾಡಿದರೂ, ಅಂತಿಮವಾಗಿ ನಾಲ್ಕು ಸೆಟ್‌ಗಳಲ್ಲಿ ಗೆದ್ದು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಮುನ್ನಡೆದರು. ಮಹಿಳೆಯರ ವಿಭಾಗದಲ್ಲಿ ಸತತ ನಾಲ್ಕನೇ ಪ್ರಶಸ್ತಿಯ ಯತ್ನದಲ್ಲಿರುವ ಹಾಲಿ ಚಾಂಪಿಯನ್ ಇಗಾ ಶ್ವಾಂಟೆಕ್ ಕೂಡ ಮುನ್ನಡೆ ಸಾಧಿಸಿದರು.
ಆದರೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಎರಡು ಬಾರಿ ರನ್ನರ್ ಅಪ್ ಆಗಿರುವ ಕ್ಯಾಸ್ಪರ್ ರುಡ್ ಅಭಿಯಾನ ಬೇಗನೇ ಅಂತ್ಯಗೊಂಡಿತು.
ಹಾಲಿ ಚಾಂಪಿಯನ್ ಅಲ್ಕರಾಜ್ 6–1, 4–6, 6–1, 6–2 ರಿಂದ ಹಂಗೆರಿಯ ಫ್ಯಾಬಿಯನ್ ಮೊರೊಜ್‌ಸಾನ್ ಅವರನ್ನು ಸೋಲಿಸಿದರು. ಇದು ಕ್ಲೇ ಅಂಕಣದಲ್ಲಿ ಸ್ಪೇನ್ ಆಟಗಾರನಿಗೆ ಈ ವರ್ಷ 18 ಪಂದ್ಯಗಳಲ್ಲಿ 17ನೇ ಜಯ.
ವಿಶ್ವ ಕ್ರಮಾಂಕದಲ್ಲಿ 41ನೇ ಸ್ಥಾನ ದಲ್ಲಿರುವ ಪೋರ್ಚುಗಲ್‌ನ ನುನೊ ಬೋರ್ಗೆಸ್ 2–6, 6–4, 6–1, 6–0 ಯಿಂದ ಏಳನೇ ಶ್ರೇಯಾಂಕದ ಪಡೆದಿರುವ ರುಡ್ ಅವರನ್ನು ಪರಾಭವ ಗೊಳಿಸಿದರು. ಮೊದಲ ಸೆಟ್ ಗೆದ್ದ ನಂತರ ನಾರ್ವೆಯ ರುಡ್ ಅವರಿಗೆ ಕಾಲಿನ ನೋವು ಕಾಡಿತು.
ಉತ್ತಮ ಲಯದಲ್ಲಿರುವ ಲೊರೆಂಜೊ ಮುಸೆಟ್ಟಿ 6–4, 6–0, 6–4 ರಿಂದ ಕೊಲಂಬಿಯಾದ ಡೇನಿಯಲ್ ಇಲಾಹಿ ಗಾಲನ್ ಅವರನ್ನು ಸೋಲಿಸಿದರು. ಇಟಲಿಯ ಆಟಗಾರ ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿದ್ದಾರೆ.
ಶ್ವಾಂಟೆಕ್ ಮುನ್ನಡೆ: ಪೊಲೆಂಡ್‌ನ ಶ್ವಾಂಟೆಕ್ ಎರಡನೇ ಸುತ್ತಿನಲ್ಲಿ 6–1, 6–2 ರಿಂದ ಅಮೆರಿಕ ಓಪನ್ ಮಾಜಿ ಚಾಂಪಿಯನ್ ಎಮ್ಮಾ ರಾಡುಕಾನು ಅವರನ್ನು ಸೋಲಿಸಿದರು. 102 ವರ್ಷಗಳ ಹಿಂದೆ ಸುಝಾನ್ ಲೆಂಗ್ಲೆನ್ ಕೊನೆಯ ಸಲ ಇಲ್ಲಿ ಸತತ ನಾಲ್ಕು ವರ್ಷ ಪ್ರಶಸ್ತಿ ಗೆದ್ದಿದ್ದು, 23 ವರ್ಷ ವಯಸ್ಸಿನ ಶ್ವಾಂಟೆಕ್ ಆ ಸಾಧನೆ ಸರಿಗಟ್ಟುವ ಯತ್ನದಲ್ಲಿದ್ದಾರೆ.
ಕಳೆದ ವರ್ಷದ ರನ್ನರ್ ಅಪ್, ನಾಲ್ಕನೇ ಶ್ರೇಯಾಂಕದ ಜಾಸ್ಮಿನ್ ಪಾವೊಲಿನಿ ಇನ್ನೊಂದು ಪಂದ್ಯದಲ್ಲಿ 6–3, 6–3 ರಿಂದ ಐಲಾ ಟೊಮಿನೊವಿಕ್ ಅವರನ್ನು ಸೋಲಿಸಿದರು.
ಒಲಿಂಪಿಕ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ 6–2, 6–3 ರಿಂದ ಕೊಲಂಬಿಯಾದ ಎಮಿಲಿಯಾನ ಅರಂಗೊ ವಿರುದ್ಧ ಸುಲಭವಾಗಿ ಗೆದ್ದು 32ರ ಸುತ್ತಿಗೆ ಸ್ಥಾನ ಕಾದಿರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.