ADVERTISEMENT

ರಾಜ್ಯದಲ್ಲಿ ಟೆನಿಸ್ ವಾಲಿಬಾಲ್

ಹರ್ಷವರ್ಧನ ಪಿ.ಆರ್.
Published 28 ಅಕ್ಟೋಬರ್ 2018, 19:45 IST
Last Updated 28 ಅಕ್ಟೋಬರ್ 2018, 19:45 IST
ಹಾವೇರಿಯಲ್ಲಿ ನಡೆದ ಟೆನಿಸ್ ವಾಲಿಬಾಲ್ ಕ್ರೀಡಾಕೂಟದಲ್ಲಿ ಆಟಗಾರ ಚೆಂಡನ್ನು ಸ್ಮ್ಯಾಷ್‌ ಮಾಡಿದ ಸಂದರ್ಭ–ಪ್ರಜಾವಾಣಿ ಚಿತ್ರ/ನಾಗೇಶ ಬಾರ್ಕಿ
ಹಾವೇರಿಯಲ್ಲಿ ನಡೆದ ಟೆನಿಸ್ ವಾಲಿಬಾಲ್ ಕ್ರೀಡಾಕೂಟದಲ್ಲಿ ಆಟಗಾರ ಚೆಂಡನ್ನು ಸ್ಮ್ಯಾಷ್‌ ಮಾಡಿದ ಸಂದರ್ಭ–ಪ್ರಜಾವಾಣಿ ಚಿತ್ರ/ನಾಗೇಶ ಬಾರ್ಕಿ   

ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ಟೆನಿಸ್ ಹಾಗೂ ವಾಲಿಬಾಲ್ ಪ್ರಿಯರು ಕುತೂಹಲದಿಂದ ಸೇರಿದ್ದರು. ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೂರ್ನಿಯನ್ನು ಟೆನಿಸ್‌ ಬಾಲ್‌ನಲ್ಲಿ ಆಡುತ್ತಾರೋ, ವಾಲಿಬಾಲ್‌ನಲ್ಲಿ ಆಡುತ್ತಾರೋ? ಎನ್ನುವ ಕುತೂಹಲ ಅವರಲ್ಲಿ. ಯಾವ ರ‍್ಯಾಕೆಟ್‌ ಬಳಸುತ್ತಾರೆ? ಎಷ್ಟು ಆಟಗಾರರು ಇರುತ್ತಾರೆ? ಎಂಬ ಚರ್ಚೆ–ಕೌತುಕವೇ ಪ್ರಮುಖವಾಗಿತ್ತು. ಆದರೆ ಅಲ್ಲಿ ನಡೆದದ್ದು, ‘ಟೆನಿಸ್ ವಾಲಿಬಾಲ್ ಟೂರ್ನಿ’!

‘ಟೆನಿಸ್‌ ವಾಲಿಬಾಲ್’ ಕ್ರೀಡೆ ಆಟಗಾರರು, ಕೋಚ್‌, ಕ್ರೀಡಾ ಸಂಸ್ಥೆಯ ಸದಸ್ಯರನ್ನು ಹೊರತುಪಡಿಸಿದರೆ ಬಹುತೇಕರಿಗೆ ಹೊಸದು. ವಾಲಿಬಾಲ್‌ (ಸೈಜ್ ನಂ. 5) ಮಾದರಿಯ ಚಿಕ್ಕ ಗಾತ್ರದ (ಸೈಜ್ ನಂ. 3) ಚೆಂಡನ್ನು ಬಳಸಿಕೊಂಡು, ಟೆನಿಸ್ ಮಾದರಿಯಲ್ಲಿ (ಒಂದು ಪಿಚ್‌ ಪುಟಿಸುವ ಮೂಲಕ) ಆಡುವ ವಿಭಿನ್ನ ಆಟವೇ ಟೆನಿಸ್‌ ವಾಲಿಬಾಲ್‌. ಈ ಕ್ರೀಡೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿಯೂ ಸದ್ದು ಮಾಡುತ್ತಿದೆ.

ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪಂದ್ಯಗಳ ಮಾದರಿಯಲ್ಲಿ ಟೂರ್ನಿ ನಡೆಯುತ್ತದೆ. ಮೊದಲಿಗೆ ಸಿಂಗಲ್ಸ್, ಬಳಿಕ ಡಬಲ್ಸ್ ಹಾಗೂ ರಿವರ್ಸ್‌ ಸಿಂಗಲ್ಸ್ ಹೀಗೆ ಮೂರು ಪಂದ್ಯಗಳು ಇರುತ್ತವೆ. ಒಟ್ಟು ನಾಲ್ವರು ಆಟಗಾರರಿಗೆ ಆಡಲು ಅವಕಾಶವಿರುತ್ತದೆ. ಇಬ್ಬರು ಹೆಚ್ಚುವರಿ ಆಟಗಾರರು ಸೇರಿದಂತೆ, ಒಂದು ತಂಡದಲ್ಲಿ ಒಟ್ಟು ಆರು ಆಟಗಾರರು ಇರುತ್ತಾರೆ. ಪ್ರತಿ ವಿಭಾಗದಲ್ಲೂ ಪ್ರತ್ಯೇಕ ಆಟಗಾರರೇ ಆಡಬೇಕು ಎನ್ನುವ ನಿಯಮವಿದೆ ಎನ್ನುತ್ತಾರೆ ಉಜಿರೆ ಎಸ್‌ಡಿಎಂ ತಂಡದ ತರಬೇತುದಾರ ಸಂದೇಶ ಪೂಂಜಾ.

ADVERTISEMENT

‘ಪ್ರತಿ ವಿಭಾಗದಲ್ಲಿ (ಸಿಂಗಲ್ಸ್, ಡಬಲ್ಸ್, ರಿವರ್ಸ್ ಸಿಂಗಲ್ಸ್) 21 ಅಂಕಗಳ ಮೂರು ಸೆಟ್‌ಗಳು ಇರುತ್ತವೆ. ಆರಂಭದ ಎರಡು ಪಂದ್ಯಗಳಲ್ಲಿ ಫಲಿತಾಂಶ ನಿರ್ಧಾರವಾದರೆ ಕೊನೆಯ ಪಂದ್ಯ ಆಡಿಸುವಂತಿಲ್ಲ. ಟೆನಿಸ್ ಮಾದರಿಯಲ್ಲಿನೆಟ್ (1.1 ಮೀ. ಎತ್ತರ) ಹಾಗೂ ವಾಲಿಬಾಲ್ ಅಂಕಣದ ಮಾದರಿಯಲ್ಲಿ 8 ಮೀ. ಅಗಲ ಮತ್ತು 16 ಮೀ. ಉದ್ದವಿರುತ್ತದೆ’ ಎಂದು ದಕ್ಷಿಣ ಕನ್ನಡ ಕ್ರೀಡಾ ಸಂಘಟನೆಯ ಸಂಯೋಜಕ ಪ್ರೇಮನಾಥ ಶೆಟ್ಟಿ ವಿವರಿಸಿದರು.

ಪಿಯು ಮಟ್ಟದಲ್ಲಿ ಪಾರಮ್ಯ
ಪದವಿಪೂರ್ವ ಕಾಲೇಜು ಮಟ್ಟದಲ್ಲಿ ಈ ಆಟವನ್ನು 2015–16ರಲ್ಲಿ ಅಳವಡಿಸಲಾಯಿತು. ಇದುವರೆಗೆ ರಾಜ್ಯಮಟ್ಟದ ನಾಲ್ಕು ಟೂರ್ನಿಗಳು ನಡೆದಿದ್ದು, ಒಟ್ಟಾರೆಯಾಗಿ ಬಾಲಕರ ವಿಭಾಗದಲ್ಲಿ ಹಾವೇರಿ ಹಾಗೂ ಬಾಲಕಿಯರ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸುವ ತಂಡಗಳೇ ಮೇಲುಗೈ ಸಾಧಿಸಿವೆ ಎಂದು ಹಾವೇರಿಯ ಎಸ್ಎಂಎಸ್‌ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಡಮ್ನಳ್ಳಿ ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ 2016–17ರಿಂದ 14 ಮತ್ತು 17 ವಯೋಮಾನದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದ ಟೂರ್ನಿ ನಡೆಸಲಾಗುತ್ತಿದೆ. ಇದರಲ್ಲಿ ರಾಜ್ಯದ ಸ್ಪರ್ಧಿಗಳು ಉತ್ತಮ ಸಾಧನೆ ತೋರಿದ್ದಾರೆ ಎಂದರು.

ಕ್ರೀಡೆಯ ಪರಿಚಯ
ಟೆನಿಸ್ ವಾಲಿಬಾಲ್ ಭಾರತದಲ್ಲಿ ಆರಂಭಗೊಂಡ ಆಟವಾಗಿದ್ದು, ಈಗ ಹೆಚ್ಚು ಜನರಿಗೆ ಪರಿಚಿತವಾಗುತ್ತಿದೆ. 1995ರಲ್ಲಿಪುಣೆಯಲ್ಲಿ ಮೊದಲ ಬಾರಿಗೆ ಟೂರ್ನಿ ನಡೆಸಲಾಗಿತ್ತು. ಭಾರತ ಟೆನಿಸ್‌ ವಾಲಿಬಾಲ್ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ವೆಂಕಟೇಶ್ ವಾಂಗಾಮಾರ, ಈ ಕುರಿತು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ, ಕ್ರೀಡೆ ಪರಿಚಯಿಸಲು ಶ್ರಮಿಸಿದ್ದರು.

‘ರಾಜ್ಯದಲ್ಲಿ 2004ರಿಂದ ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧೆಡೆ ಮುಕ್ತ ಟೂರ್ನಿ ಆಯೋಜಿಸಿಕೊಂಡು ಬಂದಿದ್ದೇವೆ. ಸತತ ಪ್ರಯತ್ನದ ಬಳಿಕ, 2014–15ರ ಪದವಿ ಪೂರ್ವ ಕಾಲೇಜಿನ ಕ್ರೀಡಾಚಟುವಟಿಕೆಗಳಲ್ಲಿ ಟೆನಿಸ್‌ ವಾಲಿಬಾಲ್‌ ಸೇರ್ಪಡೆಯಾಯಿತು. ಈಗ ದೇಶದ 22 ರಾಜ್ಯಗಳು ಈ ಆಟದಲ್ಲಿ ಸಕ್ರಿಯವಾಗಿವೆ’ ಎಂದು ಕರ್ನಾಟಕ ಟೆನಿಸ್ ವಾಲಿಬಾಲ್ ಸಂಸ್ಥೆ ಕಾರ್ಯದರ್ಶಿ ನಾಗೇಶ್ವರ ರಾವ್ ವಿವರಿಸಿದರು. ಬಿ.ಎಚ್. ಚಂದ್ರಶೇಖರ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ.

‘ಈ ಕ್ರೀಡೆ ಐದು ದೇಶಗಳಲ್ಲಿ ಜನಪ್ರಿಯತೆ ಪಡೆದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಟ್ಟದಲ್ಲಿ ದ ಅಸೋಸಿಯೇಷನ್‌ ಫಾರ್‌ ಇಂಟರ್‌ ನ್ಯಾಷನಲ್‌ ಸ್ಪೋರ್ಟ್ಸ್ ಫಾರ್‌ ಆಲ್‌ (TAFISA) ಮಾನ್ಯತೆ ನೀಡಿದೆ. ಈ ಆಟದ ಕುರಿತು ಭಾರತ ಒಲಿಂಪಿಕ್‌ ಸಂಸ್ಥೆಯ ಸಭೆಯಲ್ಲಿ ಪ್ರಬಂಧ ಕೂಡ ಮಂಡನೆಯಾಗಿದೆ. ಸ್ಕೂಲ್ ಗೇಮ್ಸ್ ಫೆಡರೇಷನ್‌ ಮಾನ್ಯತೆ ನೀಡಿದೆ. ಮುಂಬರುವ ದಿನಗಳಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಈ ಕ್ರೀಡೆಯನ್ನು ಸೇರ್ಪಡೆ ಮಾಡಲು ಪ್ರಯತ್ನ ನಡೆಯುತ್ತಿದೆ’ ಎಂದು ನಾಗೇಶ್ವರ ರಾವ್‌ ತಿಳಿಸಿದರು.

ಪದವಿ ಪೂರ್ವ ಕಾಲೇಜುಗಳ ಟೆನಿಸ್ ವಾಲಿಬಾಲ್ ಪಂದ್ಯದಲ್ಲಿ ಆಟಗಾರ್ತಿ ಚೆಂಡನ್ನು ಹಿಂದಿರುಗಿಸಿದ ಪರಿ–ಪ್ರಜಾವಾಣಿ ಚಿತ್ರ/ನಾಗೇಶ ಬಾರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.