ADVERTISEMENT

ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ರಣಕಿರೆಡ್ಡಿ ಚಿರಾಗ್‌ ಶೆಟ್ಟಿ ಜಯದ ಓಟ

ಪ್ರಣೀತ್‌ ಪರಾಭವ

ಪಿಟಿಐ
Published 2 ಆಗಸ್ಟ್ 2019, 19:45 IST
Last Updated 2 ಆಗಸ್ಟ್ 2019, 19:45 IST
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ಶೆಟ್ಟಿ– ಪಿಟಿಐ ಚಿತ್ರ
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ಶೆಟ್ಟಿ– ಪಿಟಿಐ ಚಿತ್ರ   

ಬ್ಯಾಂಕಾಕ್‌: ಗೆಲುವಿನ ಓಟ ಮುಂದುವರಿಸಿದ ಭಾರತದ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ಶೆಟ್ಟಿ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಹೋರಾಟ ಕಾರಿ ಕ್ವಾರ್ಟರ್‌ಫೈನಲ್‌ನಲ್ಲಿಭಾರತದ ಆಟಗಾರರು ಕೊರಿಯಾದ ಚೊಯ್‌ ಸೊಲ್ಗ್‌ಯು ಹಾಗೂ ಸಿವೊ ಸಿಯುಂಗ್‌ ಜಾಯ್‌ ಅವರನ್ನು 21–17, 17–21, 21–19ರಿಂದ ಮಣಿಸಿದರು. ಕೊರಿಯ ಜೋಡಿಯ ವಿರುದ್ಧ ರಣಕಿರೆಡ್ಡಿ– ಚಿರಾಗ್‌ಶೆಟ್ಟಿಗೆ ಇದು ಮೊದಲ ಜಯ.

ಶನಿವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ರಣಕಿರೆಡ್ಡಿ–ಶೆಟ್ಟಿ ಜೋಡಿಯು ಕೊರಿಯಾದ ಕೊ ಸಂಗ್‌ ಹ್ಯುನ್‌ ಹಾಗೂ ಶಿನ್‌ ಬೇಕ್‌ ಚೊಯಲ್‌ ಜೋಡಿಯನ್ನು ಎದುರಿಸುವರು.

ADVERTISEMENT

ಪ್ರಣೀತ್‌ಗೆ ಸೋಲು: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಸಾಯಿ ಪ್ರಣೀತ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನಿರಾಸೆ ಕಂಡರು. ಏಳನೇ ಶ್ರೇಯಾಂಕದ ಜಪಾನ್‌ನ ಕೆಂಟಾ ತ್ಸುನೆಯಮಾ ವಿರುದ್ಧ 18–21, 12–21 ಗೇಮ್‌ಗಳಿಂದ ಅವರು ಸೋತರು.

ಮೊದಲ ಗೇಮ್‌ನಲ್ಲಿ ಪ್ರಬಲ ಹೋರಾಟ ನೀಡಿದ ಭಾರತದ ಆಟಗಾರ ಅದೇ ಲಯ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಹೋದ ವಾರ ನಡೆದ ಜಪಾನ್‌ ಓಪನ್‌ ಟೂರ್ನಿಯಲ್ಲಿ ಪ್ರಣೀತ್‌ ಸೆಮಿಫೈನಲ್‌ಗೆ ತಲುಪಿದ್ದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ–ರಣಕಿ ರೆಡ್ಡಿ ಸವಾಲು ಅಂತ್ಯವಾಯಿತು. ಮೂರನೇ ಶ್ರೇಯಾಂಕದ ಜಪಾನ್‌ ಜೋಡಿ ಯುಟಾ ವಾಟನಬೆ–ಅರಿಸಾ ಹಿಗಾಶಿನೊ ಅವರ ಎದುರು 13–21, 15–21 ಗೇಮ್‌ಗಳಿಂದ ಭಾರತದ ಜೋಡಿ ಸೋತಿತು. ಕೇವಲ 28 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.