ADVERTISEMENT

ಬ್ಯಾಡ್ಮಿಂಟನ್‌: ಫೈನಲ್‌ಗೆ ರಣಕಿರೆಡ್ಡಿ–ಚಿರಾಗ್‌ಶೆಟ್ಟಿ

ಥಾಯ್ಲೆಂಡ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಸುತ್ತಿಗೆ ರಚನೊಕ್‌ ಇಂಟನಾನ್‌ ಲಗ್ಗೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:00 IST
Last Updated 3 ಆಗಸ್ಟ್ 2019, 19:00 IST
ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ– ಪಿಟಿಐ ಚಿತ್ರ
ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ– ಪಿಟಿಐ ಚಿತ್ರ   

ಬ್ಯಾಂಕಾಕ್‌: ಲಯದ ಅಲೆಯಲ್ಲಿ ತೇಲುತ್ತಿರುವ ಭಾರತದ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆ ಮೂಲಕ ಬಿಡಬ್ಲ್ಯುಎಫ್‌ ಸೂಪರ್‌ 500 ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಜೋಡಿ ಎಂಬ ಸಾಧನೆಗೆ ಪಾತ್ರವಾಯಿತು.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರಣಕಿರೆಡ್ಡಿ– ಚಿರಾಗ್‌ಶೆಟ್ಟಿ 22–20, 22–24, 21–9 ಗೇಮ್‌ಗಳಿಂದ ಕೊರಿಯಾದ ಕೊ ಸಂಗ್‌ ಹ್ಯುನ್‌– ಶಿನ್‌ ಬೇಕ್‌ ಚಿಯೊಲ್‌ ಜೋಡಿಯ ಎದುರು ಜಯಭೇರಿ ಮೊಳಗಿಸಿತು. 63 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಬಲ ಹೋರಾಟ ಕಂಡುಬಂತು.

2019ರ ಋತುವಿನಲ್ಲಿ ಮೊದಲ ಬಾರಿ ಈ ಜೋಡಿ ಟೂರ್ನಿಯೊಂದರ ಫೈನಲ್‌ ತಲುಪಿದೆ. ಶ್ರೇಯಾಂಕರಹಿತ ಭಾರತದ ಜೋಡಿ ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಚೀನಾದ ಲಿ ಜುನ್‌ ಹುಯ್‌ – ಲಿವು ಯು ಚೆನ್‌ ವಿರುದ್ಧ ಸೆಣಸಲಿದೆ.

ADVERTISEMENT

ರಚನೊಕ್‌ ಪಾರಮ್ಯ:ಥಾಯ್ಲೆಂಡ್‌ ಆಟಗಾರ್ತಿ ರಚನೊಕ್‌ ಇಂಟನಾನ್‌ ತಮ್ಮದೇ ದೇಶದ ಪಾರ್ನ್‌ಪವಿ ಚೊಚುವಾಂಗ್‌ ಅವರಿಗೆ ಸೋಲುಣಿಸಿ ಮಹಿಳಾ ಸಿಂಗಲ್ಸ್ ಫೈನಲ್‌ ತಲುಪಿದರು. 23–21, 17–21, 21–19ರಿಂದ ರಚನೊಕ್‌ ಗೆಲುವಿನ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.