ADVERTISEMENT

ಬಾಕ್ಸಿಂಗ್ ಫೆಡರೇಷನ್‌ನಲ್ಲಿ ಮುಂದುವರಿದ ‘ಗುದ್ದಾಟ’

ಪಿಟಿಐ
Published 19 ಮಾರ್ಚ್ 2025, 22:59 IST
Last Updated 19 ಮಾರ್ಚ್ 2025, 22:59 IST
   

ನವದೆಹಲಿ: ಒಲಿಂಪಿಕ್ ಪದಕ ವಿಜೇತೆ ಲವ್ಲೀನಾ ಬೊರ್ಗಹೇನ್ ಸೇರಿದಂತೆ ಅಸ್ಸಮ್‌ನ ಬಾಕ್ಸರ್‌ಗಳು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗಹಿಸದಂತೆ, ಅಮಾನತಾಗಿರುವ ಭಾರತ  ಬಾಕ್ಸಿಂಗ್ ಫೆಡರೇಷನ್‌ನ ಮಹಾ ಪ್ರಧಾನ ಕಾರ್ಯದರ್ಶಿ ಹೇಮಂತ ಕಲಿತಾ ತಡೆಯುತ್ತಿದ್ದರು ಎಂದು ಫೆಡರೇಷನ್‌ನ ಅಧ್ಯಕ್ಷ ಅಜಯ್ ಸಿಂಗ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಹೇಮಂತ ನಿರಾಕರಿಸಿ ದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನ ಲ್ಲಿ 69 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಲವ್ಲೀನಾ ಅವರು ಗುರುವಾರ ಆರಂಭವಾಗುವ ದೇಶದ ಈ ಪ್ರಮುಖ ಕೂಟದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಆದರೆ ಅವರಿಗೆ ಹಿಂದೆಸರಿಯುವಂತೆ ಕಲಿತಾ ಸೂಚಿಸಿದರು ಎಂದು ಅಜಯ್ ಸಿಂಗ್ ಅವರು ಬುಧವಾರ ‘ತುರ್ತು  ಪತ್ರಿಕಾ ಗೋಷ್ಠಿ’ಯಲ್ಲಿ ತಿಳಿಸಿದರು.

ಹೇಮಂತ ಕಲಿತಾ ಅವರು ಅಸ್ಸಾಂ ಬಾಕ್ಸಿಂಗ್ ಸಂಸ್ಥೆಯಲ್ಲಿ ಕಾರ್ಯದರ್ಶಿ ಆಗಿದ್ದಾರೆ. 

ADVERTISEMENT

ಫೆಡರೇಷನ್‌ನಲ್ಲಿ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆ ನಡೆಸಿದ್ದ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್‌ ಅವರು ಮಂಗಳವಾರ ನೀಡಿದ ವರದಿಯ ಆಧಾರದಲ್ಲಿ ಹೇಮಂತ ಅವರನ್ನು ಮಂಗಳವಾರ ಅಮಾನತು ಮಾಡಲಾಗಿತ್ತು.

‘ಮಹಿಳಾ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸದಂತೆ ಅಸ್ಸಾಂನ ಸಂಸ್ಥೆ ಮಹಿಳೆಯರನ್ನು ನಿರುತ್ತೇಜಿಸುತ್ತಿದೆ’ ಎಂದು ಸಿಂಗ್ ದೂರಿದರು.

ನಿರಾಕರಿಸಿದ ಕಲಿತಾ: ಆದರೆ, ‘ಈ ಆರೋಪಗಳು ಆಧಾರರಹಿತ’ ಎಂದಿರುವ ಕಲಿತಾ, ಸಮಸ್ಯೆ ಇದ್ದುದು ಈ ಕೂಟದ ದಿನಾಂಕ ನಿಗದಿಯ ಬಗ್ಗೆ ಎಂದರು.

‘ನನ್ನ ಹೆಸರು ಕೆಡಿಸಲು ಇಂಥ ಆರೋಪ ಮಾಡಲಾಗುತ್ತಿದೆ. ಅಂಥ ದ್ದೇನನ್ನೂ ನಾನು ಮಾಡಿಲ್ಲ. ಈ ಟೂರ್ನಿಯ ದಿನಾಂಕದ ಬಗ್ಗೆ ರಾಜ್ಯ ಘಟಕಗಳಿಗೆ ಸಮಾಧಾನ ಇರಲಿಲ್ಲ. ಬಿಎಫ್‌ಐಗೆ ಹಲವು ರಾಜ್ಯ ಘಟಕಗಳು ಈ ಬಗ್ಗೆ ಪತ್ರವನ್ನೂ ಬರೆದಿದ್ದವು’ ಎಂದು ಅವರು ಪಿಟಿಐಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.