ADVERTISEMENT

ಸಂದೀಪ್, ಪ್ರಿಯಾಂಕಾ, ರಾಹುಲ್‌ಗೆ ಟೋಕಿಯೊ ಟಿಕೆಟ್‌

ರಾಷ್ಟ್ರೀಯ ಮುಕ್ತ ನಡಿಗೆ ಚಾಂಪಿಯನ್‌ಷಿಪ್‌: ರಾಷ್ಟ್ರೀಯ ದಾಖಲೆ

ಪಿಟಿಐ
Published 13 ಫೆಬ್ರುವರಿ 2021, 12:48 IST
Last Updated 13 ಫೆಬ್ರುವರಿ 2021, 12:48 IST
ಸಂದೀಪ್ ಕುಮಾರ್–ಪಿಟಿಐ ಚಿತ್ರ
ಸಂದೀಪ್ ಕುಮಾರ್–ಪಿಟಿಐ ಚಿತ್ರ   

ರಾಂಚಿ: ಭಾರತದ ನಡಿಗೆ ಸ್ಪರ್ಧಿಗಳಾದ ಸಂದೀಪ್ ಕುಮಾರ್, ಪ್ರಿಯಾಂಕಾ ಗೋಸ್ವಾಮಿ ಹಾಗೂ ರಾಹುಲ್ ಅವರು ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ್ದಾರೆ. ಇಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮುಕ್ತ ನಡಿಗೆ ಚಾಂಪಿಯನ್‌ಷಿಪ್‌ನಲ್ಲಿ ಸಂದೀಪ್ ಹಾಗೂ ಪ್ರಿಯಾಂಕಾ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ20 ಕಿ.ಮೀ. ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದರು.

ರಾಷ್ಟ್ರೀಯ ಮುಕ್ತ ನಡಿಗೆ ಚಾಂಪಿಯನ್‌ಷಿಪ್‌ಕೋವಿಡ್‌–19 ಲಾಕ್‌ಡೌನ್ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಅಥ್ಲೆಟಿಕ್ಸ್ ಸ್ಪರ್ಧೆಯಾಗಿದೆ.

ಸದ್ಯ ಮೂವರು ಅರ್ಹತೆ ಗಿಟ್ಟಿಸುವುದರೊಂದಿಗೆ ಟೋಕಿಯೊ ಕೂಟದಲ್ಲಿ ಸ್ಪರ್ಧಿಸುವ ಭಾರತದ ನಡಿಗೆ ಸ್ಪರ್ಧಿಗಳ ಸಂಖ್ಯೆ ಐದಕ್ಕೇರಿತು. ಕೆ.ಟಿ. ಇರ್ಫಾನ್ (ಪುರುಷರ 20 ಕಿ.ಮೀ) ಹಾಗೂ ಭಾವನಾ ಜಾಟ್‌ (ಮಹಿಳೆಯರ 20 ಕಿ.ಮೀ.) ಈಗಾಗಲೇ ಟಿಕೆಟ್ ಗಿಟ್ಟಿಸಿದ್ದಾರೆ.

ADVERTISEMENT

ನಿಗದಿತ ಗುರಿಯನ್ನು ಸಂದೀಪ್ ಅವರು 1 ತಾಸು 20 ನಿಮಿಷ 16 ಸೆಕೆಂಡುಗಳಲ್ಲಿ ತಲುಪಿದರೆ, ಪ್ರಿಯಾಂಕಾ 1:28:45 ಸಮಯ ತೆಗೆದುಕೊಂಡು ಅಗ್ರಸ್ಥಾನ ಗಳಿಸಿದರು. ಪುರುಷರ 20 ಕಿ.ಮೀ. ವಿಭಾಗದಲ್ಲಿ ರಾಹುಲ್‌ (1:20:26) ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಒಲಿಂಪಿಕ್ಸ್ ಅರ್ಹತೆ ಗಳಿಸಲು ಪುರುಷ ಸ್ಪರ್ಧಿಗಳಿಗೆ 1 ತಾಸು 21 ನಿಮಿಷಗಳು ಹಾಗೂ ಮಹಿಳೆಯರಿಗೆ 1 ತಾಸು 31 ನಿಮಿಷಗಳ ಗುರಿ ನಿಗದಿಪ‍ಡಿಸಲಾಗಿತ್ತು.

ಸಂದೀಪ್ ಅವರು ಈ ಹಿಂದೆ ಇರ್ಫಾನ್ ಹಾಗೂ ದೇವೇಂದ್ರ ಸಿಂಗ್ ಅವರು ಸ್ಥಾಪಿಸಿದ್ದ ಜಂಟಿ ರಾಷ್ಟ್ರೀಯ ದಾಖಲೆ (1:20:21) ಮೀರಿದರು.

ಭಾವನಾ ಜಾಟ್ ಹೆಸರಲ್ಲಿದ್ದ ದಾಖಲೆಯನ್ನು (1:29:54) ಪ್ರಿಯಾಂಕಾ ಅಳಿಸಿ ಹಾಕಿದರು. ಇದೇ ಸ್ಪರ್ಧೆಯಲ್ಲಿ ಭಾವನಾ 1:32:59 ಅವಧಿಗೆ ಸ್ಪರ್ಧೆ ಪೂರ್ಣಗೊಳಿಸಿ ಎರಡನೇ ಸ್ಥಾನ ಗಳಿಸಿದರು.

ಈ ವರ್ಷದ ಜುಲೈ–ಆಗಸ್ಟ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.