ADVERTISEMENT

ಮಹಿಳೆಯರ ಹಾಕಿ ತಂಡ ಏಷ್ಯಾಕಪ್‌ ಟೂರ್ನಿ: ಕಂಚಿನ ಪದಕದ ಮೇಲೆ ಭಾರತ ಕಣ್ಣು

ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿ: ಚೀನಾ ಎದುರು ಹಣಾಹಣಿ

ಪಿಟಿಐ
Published 27 ಜನವರಿ 2022, 14:58 IST
Last Updated 27 ಜನವರಿ 2022, 14:58 IST
ಗುರ್ಜಿತ್ ಕೌರ್‌ –ರಾಯಿಟರ್ಸ್ ಚಿತ್ರ
ಗುರ್ಜಿತ್ ಕೌರ್‌ –ರಾಯಿಟರ್ಸ್ ಚಿತ್ರ   

ಮಸ್ಕತ್: ಭಾರತ ಮಹಿಳೆಯರ ಹಾಕಿ ತಂಡ ಏಷ್ಯಾಕಪ್‌ ಟೂರ್ನಿಯಲ್ಲಿ ಕಂಚಿನ ಪದಕದ ಮೇಲೆ ಕಣ್ಣಿಟ್ಟು ಶುಕ್ರವಾರ ಕಣಕ್ಕೆ ಇಳಿಯಲಿದೆ. ಮೂರು ಹಾಗೂ ನಾಲ್ಕನೇ ಸ್ಥಾನ ನಿರ್ಣಯಿಸುವ ಪಂದ್ಯದಲ್ಲಿ ಭಾರತಕ್ಕೆ ಚೀನಾ ಎದುರಾಳಿ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿ ಬಂದಿರುವ ಭಾರತ ತಂಡದ ಅಭ್ಯಾಸಕ್ಕೆ ಕೋವಿಡ್‌–19ರಿಂದಾಗಿ ಅಡ್ಡಿಯಾಗಿತ್ತು. ಅದು ಟೂರ್ನಿಯಲ್ಲಿ ಆಡಿದ ಪಂದ್ಯಗಳಲ್ಲಿ ಪ್ರತಿಫಲಿಸಿತ್ತು. ನಿರ್ಣಾಯಕ ಹಂತದಲ್ಲಿ ನೀರಸ ಆಟವಾಡಿರುವ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು.

ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 9–0 ಅಂತರದಲ್ಲಿ ಗೆದ್ದಿದ್ದ ತಂಡ ನಂತರ ಜಪಾನ್‌ಗೆ 0–2ರಲ್ಲಿ ಮಣಿದಿತ್ತು. 9–1ರಲ್ಲಿ ಸಿಂಗಪುರವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ನಾಲ್ಕರ ಘಟ್ಟದ ಪಂದ್ಯದಲ್ಲಿ 2–3ರಲ್ಲಿ ಕೊರಿಯಾಗೆ ಮಣಿದಿತ್ತು. ಕೊರಿಯಾ ಮತ್ತು ಜಪಾನ್ ನಡುವೆ ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಭಾರತದ ರಕ್ಷಣಾ ವಿಭಾಗದ ವೈಫಲ್ಯ ಕಂಡಿತ್ತು. ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ತಂಡ ಕೈಚೆಲ್ಲಿತ್ತು.

ADVERTISEMENT

ರಕ್ಷಣಾ ವಿಭಾಗದ ಆಟಗಾರ್ತಿ ಸವಿತಾ ಅವರ ನೇತೃತ್ವದ ತಂಡದಲ್ಲಿ ಗುರ್ಜೀತ್ ಕೌರ್‌, ದೀಪ್‌ ಗ್ರೇಸ್ ಎಕ್ಕ ಮುಂತಾದ ಅನುಭವಿ ಆಟಗಾರ್ತಿಯರು ಇದ್ದಾರೆ. ಫಾರ್ವರ್ಡ್ ವಿಭಾಗಕ್ಕೆ ವಂದನಾ ಕಟಾರಿಯಾ, ಮೋನಿಕಾ, ನವನೀತ್ ಕೌರ್‌ ಮುಂತಾದವರ ಬಲ ಇದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ 10ನೇ ಸ್ಥಾನದಲ್ಲಿದ್ದರೆ ಚೀನಾ 13ನೇ ಸ್ಥಾನದಲ್ಲಿದೆ. ಹಿಂದಿನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಭಾರತ ಜಯ ಗಳಿಸಿದೆ. ಒಂದರಲ್ಲಿ ಡ್ರಾ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.