ADVERTISEMENT

Tokyo Olympic| ಗಾಲ್ಫ್‌: ಮೊದಲ ಪದಕಕ್ಕೆ ಮೂವರ ತವಕ

ಟೋಕಿಯೊ ಒಲಿಂಪಿಕ್ಸ್‌ 2020 ಭಾರತದ ಕನಸಿನ ಪಯಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 16:51 IST
Last Updated 21 ಜುಲೈ 2021, 16:51 IST
ಅದಿತಿ ಅಶೋಕ್ – ಪ್ರಜಾವಾಣಿ ಚಿತ್ರ
ಅದಿತಿ ಅಶೋಕ್ – ಪ್ರಜಾವಾಣಿ ಚಿತ್ರ   

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತದ ಮೊದಲ ಮಹಿಳೆ, ಅತಿ ಕಿರಿಯ ಮಹಿಳಾ ಗಾಲ್ಫರ್‌ (18 ವರ್ಷ, 144 ದಿನಗಳು), ಯೂತ್ ಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ ದೇಶದ ಮೊದಲ ಮಹಿಳೆ, ಮಹಿಳೆಯರ ಯುರೋಪಿಯನ್ ಗಾಲ್ಫ್‌ ಟೂರ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಕ್ರೀಡಾಪಟು...

ಭಾರತದ ಗಾಲ್ಫ್‌ನಲ್ಲಿ ಅನೇಕ ಮೊದಲುಗಳಿಗೆ ಕಾರಣರಾದ ಕರ್ನಾಟಕದ ಅದಿತಿ ಅಶೋಕ್ ಈಗ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ತಂದುಕೊಡುವ ತವಕದೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಟೋಕಿಯೊ ಕೂಟದಲ್ಲಿ ಪಾಲ್ಗೊಳ್ಳುವ ದೇಶದ ಮೂವರು ಗಾಲ್ಫರ್‌ಗಳ ಪೈಕಿ ಅವರೂ ಒಬ್ಬರು.

ಒಲಿಂಪಿಕ್ಸ್‌ನಲ್ಲಿ ಗಾಲ್ಫ್ ‘ಅತಿಥಿ’ ಇದ್ದಂತೆ. ಆರಂಭದಲ್ಲಿ ಒಮ್ಮೆ ಕಾಣಿಸಿಕೊಂಡು ವರ್ಷಗಳ ನಂತರ ಮತ್ತೆ ಮುನ್ನೆಲೆಗೆ ಬಂದಿತ್ತು. ಭಾರತಕಕ್ಕಂತೂ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯಲ್ಲಿ ಈ ಕ್ರೀಡೆ ತೀರಾ ಹೊಸತು. ದೇಶದ ಗಾಲ್ಫರ್‌ಗಳು ಒಲಿಂಪಿಕ್ಸ್‌ನಲ್ಲಿ ಮೊದಲು ಕಾಣಿಸಿಕೊಂಡದ್ದು 2016ರ ಆವೃತ್ತಿಯಲ್ಲಿ.

ADVERTISEMENT

1900ರ ಒಲಿಂಪಿಕ್ಸ್‌ನಲ್ಲಿ ಗಾಲ್ಫ್ ಕ್ರೀಡೆಯನ್ನು ಅಳವಡಿಸಿದಾಗ ಅಮೆರಿಕ, ಬ್ರಿಟನ್, ಗ್ರೀಸ್‌ ಮತ್ತು ಫ್ರಾನ್ಸ್‌ ದೇಶಗಳು ಪಾಲ್ಗೊಂಡಿದ್ದವು. 1904ರಲ್ಲಿ ಕೆನಡ ಮತ್ತು ಅಮೆರಿಕ ಮಾತ್ರ ಭಾಗವಹಿಸಿತ್ತು. ಆನಂತರ ಗಾಲ್ಫ್‌ ಕಾಣಿಸಿಕೊಂಡದ್ದು 2016ರಲ್ಲಿ. ಆಗ 41 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡರು. ಭಾರತವೂ ಮೂವರನ್ನು ಕಳುಹಿಸಿತ್ತು. ಅನಿರ್ಬನ್ ಲಾಹಿರಿ ಮತ್ತು ಎಸ್‌ಎಸ್‌‍ಪಿ ಚೌರಾಸಿಯ ಅವರೊಂದಿಗೆ ಅದಿತಿ ಕೂಡ ಕಣದಲ್ಲಿದ್ದರು.

ಆದರೆ ಚೌರಾಸಿಯಾ 50ನೇ ಸ್ಥಾನ ಮತ್ತು ಅನಿರ್ಬನ್ 57ನೇ ಸ್ಥಾನದೊಂದಿಗೆ ಮರಳಿದರು. ಅದಿತಿ ಆ ಕೂಟದಲ್ಲಿ 41ನೇ ಸ್ಥಾನ ಗಳಿಸಿದ್ದರು. ಈ ವರ್ಷ ಪ್ರತಿ ಟೂರ್‌ನಲ್ಲೂ ಉತ್ತಮ ಸಾಮರ್ಥ್ಯ ತೋರಿರುವ ಅವರು ಈಗ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಎಲ್‌ಪಿಜಿಎ ಟೂರ್‌ನಲ್ಲಿ ಪಾಲ್ಗೊಂಡ ಭಾರತದ ಮೊದಲ ಗಾಲ್ಫ್ ಪಟು ಎಂಬ ಖ್ಯಾತಿಯನ್ನು 2017ರಲ್ಲಿ ಗಳಿಸಿದ ಅದಿತಿ2013ರಲ್ಲಿ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಮತ್ತು 2014ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಭಾಗವಹಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು. ರಿಯೊ ಒಲಿಂಪಿಕ್ಸ್‌ಗೆ ತೆರಳುವ ಮುನ್ನ 2016ರಲ್ಲಿ ಯುರೋಪಿಯನ್ ಟೂರ್ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದರು.

ಪುಣೆಯ ಅನಿರ್ಬನ್ ಲಾಹಿರಿ ಪಿಜಿಎ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್ ಟೂರ್‌ನಲ್ಲಿ ಪರಿಚಿತ ಹೆಸರು. 2015ರ ಪಿಜಿಎ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನವನ್ನು ಹಂಚಿಕೊಂಡಿದ್ದು ಅವರ ಗರಿಷ್ಠ ಸಾಧನೆ. ಏಷ್ಯನ್ ಟೂರ್‌ನಲ್ಲಿ ಒಂಬತ್ತನೇ ಸ್ಥಾನ ಹಂಚಿಕೊಂಡು ಗಮನ ಸೆಳೆದಿದ್ದರು.

ಬೆಂಗಳೂರಿನ ಉದಯನ್ ಮಾನೆ 2015ರಿಂದ ವೃತ್ತಿಪರ ಗಾಲ್ಫ್ ಆಡುತ್ತಿದ್ದಾರೆ. ವಿವಿಧ ಟೂರ್‌ಗಳಲ್ಲಿ ಈ ವರೆಗೆ 11 ಪ್ರಶಸ್ತಿ ಗೆದ್ದಿದ್ದಾರೆ. ಇವರಿಬ್ಬರೂ ಪುರುಷರ ವೈಯಕ್ತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು ಅದಿತಿ ಮಹಿಳೆಯ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.