ಟೋಕಿಯೊ:ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಯು ತನ್ನ ಕಾರ್ಯಕಾರಿ ಮಂಡಳಿಯಲ್ಲಿ ಹೆಚ್ಚುವರಿಯಾಗಿ 12 ಮಹಿಳೆಯರಿಗೆ ಸ್ಥಾನ ನೀಡುವ ಮೂಲಕ ಲಿಂಗ ಸಮಾನತೆಯತ್ತ ಸಾಂಕೇತಿಕ ಹೆಜ್ಜೆ ಇಟ್ಟಿದೆ. ಮಂಗಳವಾರ ನಡೆದ ಮಂಡಳಿಯ ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ತೋಶಿರೊ ಮುಟೊ ಈ ವಿಷಯವನ್ನು ಪ್ರಕಟಿಸಿದರು.
ಮಂಡಳಿಯಲ್ಲಿ ಈಗ ಇರುವ ಒಟ್ಟು 45 ಮಂದಿಯ ಪೈಕಿ ಮಹಿಳೆಯರ ಸಂಖ್ಯೆ 19 ಆಗಿದೆ. ಅಂದರೆ ಶೇಕಡಾ 42ರಷ್ಟು ಮಹಿಳೆಯರಿದ್ದಾರೆ.
ಹೊಸದಾಗಿ ಮಹಿಳೆಯರ ಸೇರ್ಪಡೆಯಿಂದಾಗಿ ಮಂಡಳಿಯ ಒಟ್ಟು ಸದಸ್ಯರ ಸಂಖ್ಯೆಯನ್ನು 35ರಿಂದ 45ಕ್ಕೆ ಏರಿಸಲಾಗಿದೆ. ಹೊಸ ಸದಸ್ಯರ ಹೆಸರನ್ನು ಬುಧವಾರ ಪ್ರಕಟಿಸಲಾಗುತ್ತದೆ.
ಒಲಿಂಪಿಕ್ಸ್ ಆಯೋಜನಾ ಸಮಿತಿಗೆ ಅಧ್ಯಕ್ಷರಾಗಿ ಇತ್ತೀಚೆಗೆ ಸೀಕೊ ಹಶಿಮೋಟೊ ನೇಮಕಗೊಂಡಿದ್ದರು.. ಸಮಿತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳಕ್ಕೆ ಅವರೇ ಪ್ರೇರಣೆಯಾಗಿದ್ದಾರೆ. ಮಹಿಳೆಯರ ಕುರಿತು ಅನುಚಿತ ಹೇಳಿಕೆ ನೀಡಿ ಹುದ್ದೆ ಕಳೆದುಕೊಂಡಿದ್ದ ಮಾಜಿ ಅಧ್ಯಕ್ಷ ಯೋಶಿರೊ ಮೊರಿ ಅವರ ಸ್ಥಾನಕ್ಕೆ ಮಾಜಿ ಒಲಿಂಪಿಯನ್ ಸೀಕೊ ಅವರನ್ನು ನೇಮಿಸಲಾಗಿದೆ.
ವಿಶ್ವ ಆರ್ಥಿಕ ವೇದಿಕೆಯ ಲಿಂಗ ಸಮಾನತೆ ಕ್ರಮಾಂಕದಲ್ಲಿ ಜಪಾನ್ 121ನೇ (153 ದೇಶಗಳ ಪೈಕಿ) ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.