ADVERTISEMENT

Tokyo Olympics: ಬಾಕ್ಸಿಂಗ್‌ ತಂಡಕ್ಕೆ ಮೈಸೂರಿನ ಕುಟ್ಟಪ್ಪ ಮುಖ್ಯ ಕೋಚ್‌

ಕೋವಿಡ್‌ ನಡುವೆಯೂ ನಿಲ್ಲದ ತರಬೇತಿ!

ಕೆ.ಓಂಕಾರ ಮೂರ್ತಿ
Published 15 ಜುಲೈ 2021, 1:46 IST
Last Updated 15 ಜುಲೈ 2021, 1:46 IST
ಸಿ.ಎ.ಕುಟ್ಟಪ್ಪ
ಸಿ.ಎ.ಕುಟ್ಟಪ್ಪ   

ಮೈಸೂರು: ‘ಕೋವಿಡ್‌ ಸಮಯದಲ್ಲೂ ದೇಶ–ವಿದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತರಬೇತಿ ನಡೆಸಿದ್ದು, ಸಂಪೂರ್ಣ ಸಜ್ಜಾಗಿದ್ದೇವೆ. ಮೂರು ಪದಕ ಗೆದ್ದು ಬರುವ ಭರವಸೆ ಖಂಡಿತ ಇದೆ...’

–ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ಪುರುಷರ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌, ಮೈಸೂರಿನ ನಿವಾಸಿ ಚೇನಂಡ ಅಚ್ಚಯ್ಯ ಕುಟ್ಟಪ್ಪ ವಿಶ್ವಾಸದಿಂದ ಹೀಗೆ ನುಡಿದು ನಕ್ಕರು.

ಈ ಹುದ್ದೆಗೆ ನೇಮಕವಾದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಕುಟ್ಟಪ್ಪ. ಪುಣೆಯಲ್ಲಿ ಸುಬೇದಾರ್‌ ಆಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ 40ವರ್ಷ ವಯಸ್ಸು.

ADVERTISEMENT

ಅವರಿಗಿದು ಎರಡನೇ ಒಲಿಂಪಿಕ್ಸ್‌. 2016ರಲ್ಲಿ ಬ್ರೆಜಿಲ್‌ನ ರಿಯೊ ಡಿಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ‌

‘ಹಿಂದಿನ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ಆದರೆ, ಈ ಬಾರಿ ಸಾಕಷ್ಟು ಪ್ರಯತ್ನ ಹಾಕಿದ್ದೇವೆ. ತಂಡಕ್ಕೆ ಉತ್ತಮ ತರಬೇತಿಯೂ ಲಭಿಸಿದೆ’ ಎಂದು ‘ಪ್ರಜಾವಾಣಿ’ಗೆ ಇಟಲಿಯಿಂದ ಪ್ರತಿಕ್ರಿಯಿಸಿದರು.

‘ಪ್ರತಿಭಾವಂತ ಸ್ಪರ್ಧಿಗಳಿದ್ದು, ಚಾಕಚಕ್ಯತೆ ಮೆರೆಯಲು ಸಿದ್ಧರಾಗಿದ್ದಾರೆ. 52 ಕೆ.ಜಿ ವಿಭಾಗದಲ್ಲಿ ಅಮಿತ್‌ ಪಂಗಾಲ್‌ ಅವರು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದಾರೆ. ಮನೀಷ್‌ ಕೌಶಿಕ್‌ ಅವರ ಮೇಲೂ ಭರವಸೆ ಇಡಬಹುದು’ ಎಂದರು.

‘ಒಂದು ತಿಂಗಳಿಂದ ಇಟಲಿಯಲ್ಲಿ ತರಬೇತಿ ಕೈಗೊಂಡಿದ್ದು, ಜುಲೈ 18ರಂದು ಟೋಕಿಯೊಗೆ ತೆರಳಲಿದ್ದೇವೆ. ಐವರು ಪುರುಷರು ಹಾಗೂ ನಾಲ್ವರು ಮಹಿಳೆಯರು ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ. ‌ಪುರುಷರ ವಿಭಾಗದಲ್ಲಿ
ಅಮಿತ್‌ ಪಂಗಾಲ್‌, ಮನೀಷ್‌ ಕೌಶಿಕ್‌, ವಿಕಾಸ್‌ ಕೃಷ್ಣನ್‌, ಆಶಿಶ್‌ ಕುಮಾರ್‌ ಹಾಗೂ ಸತೀಶ್‌ ಕುಮಾರ್‌, ಮಹಿಳೆಯರ ವಿಭಾಗದಲ್ಲಿ ಎಂ.ಸಿ.ಮೇರಿ ಕೋಮ್‌, ಸಿಮ್ರಾನ್‌ಜಿತ್‌ ಕೌರ್‌, ಲವ್ಲಿನಾ ಹಾಗೂ ಪೂಜಾ ರಾಣಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಖುಷಿಯ ಜೊತೆಗೆ ಇದೊಂದು ಸವಾಲಿನ ಜವಾಬ್ದಾರಿ. ಹಿಂದೆ ಸಹಾಯಕ ಕೋಚ್‌ ಆಗಿದ್ದರಿಂದ ಹೆಚ್ಚಿನ ಒತ್ತಡ ಇರಲಿಲ್ಲ. ಈಗ ಹೆಚ್ಚುವರಿ ಕೆಲಸಗಳು ಇರುತ್ತವೆ’ ಎಂದು ಹೇಳಿದರು.

***

14 ವರ್ಷಗಳಿಂದ ಭಾರತ ಬಾಕ್ಸಿಂಗ್‌ ತಂಡದ ಜೊತೆಗಿದ್ದೇನೆ. ಅನುಭವಿ ಹಾಗೂ ಯುವ ಬಾಕ್ಸರ್‌ಗಳಿದ್ದಾರೆ. ನಮ್ಮ ತಂಡ ಏಷ್ಯಾದಲ್ಲೇ ಅಗ್ರಸ್ಥಾನದಲ್ಲಿದೆ.

- ಸಿ.ಎ.ಕುಟ್ಟಪ್ಪ, ಮುಖ್ಯ ಕೋಚ್‌, ಭಾರತ ಬಾಕ್ಸಿಂಗ್‌ ಪುರುಷರ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.