ADVERTISEMENT

Tokyo Olympics| ಟೋಕಿಯೊ ಒಲಿಂಪಿಕ್ಷ್‌ ಸುದ್ದಿ ಸ್ವಾರಸ್ಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 18:30 IST
Last Updated 23 ಜುಲೈ 2021, 18:30 IST
   

‘ಕೂಟ ರದ್ದುಪಡಿಸಿ’

ಕೂಟ ರದ್ದು ಪಡಿಸುವಂತೆ 50 ಮಂದಿಯ ಗುಂಪೊಂದು ಶುಕ್ರವಾರ ಟೋಕಿಯೊದಲ್ಲಿ ಪ್ರತಿಭಟನೆ ನಡೆಸಿತು.

ಮೆಟ್ರೊ ಪಾಲಿಟಿನ್‌ ಕಟ್ಟಡದ ಎದುರು ಸೇರಿದ್ದ ಪ್ರತಿಭಟನಾಕಾರರು ‘ಒಲಿಂಪಿಕ್ಸ್‌ ರದ್ದು ಮಾಡಿ; ಜನರ ಜೀವ ಉಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು.

ADVERTISEMENT

ಒಸಾಕ ಪಂದ್ಯ ಮುಂದಕ್ಕೆ

ಜಪಾನ್‌ನ ಭರವಸೆಯ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ ಭಾನುವಾರ ಒಲಿಂಪಿಕ್ಸ್‌ ಅಭಿಯಾನ ಆರಂಭಿಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಹೋರಾಟದಲ್ಲಿ ಒಸಾಕ, ಚೀನಾದ ಜೆಂಗ್‌ ಸಾಯ್‌ಸಾಯ್‌ ಎದುರು ಆಡಬೇಕಿತ್ತು. ಶನಿವಾರ ನಿಗದಿಯಾಗಿದ್ದ ಈ ಪಂದ್ಯವನ್ನು ಭಾನುವಾರಕ್ಕೆ ಮುಂದೂಡಲಾಗಿದೆ.

ಅಮೆರಿಕ ಪಾಳಯದಲ್ಲಿ ಲಸಿಕೆ ಚರ್ಚೆ

ಒಲಿಂಪಿಕ್ಸ್‌ ಸ್ಪರ್ಧೆಗಳ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಹೊತ್ತಿನಲ್ಲಿ ಅಮೆರಿಕ ಪಾಳಯದಲ್ಲಿ ಲಸಿಕೆಯ ಚರ್ಚೆ ಕಾವೇರಿದೆ.

ಕೂಟದಲ್ಲಿ ಪಾಲ್ಗೊಂಡಿರುವ 613 ಸದಸ್ಯರ ಪೈಕಿ ಸುಮಾರು 100 ಜನ ಲಸಿಕೆಯನ್ನೇ ಪಡೆದಿಲ್ಲ.

‘ಲಸಿಕೆಗೆ ದೇಹ ಹೇಗೆ ಸ್ಪಂದಿಸುತ್ತದೆಯೋ ಗೊತ್ತಿಲ್ಲ. ಸುಮ್ಮನೆ ಅಪಾಯ ಮೈಮೇಲೆ ಎಳೆದುಕೊಳ್ಳಲು ನಾನಂತೂ ಸಿದ್ಧನಿಲ್ಲ. ಮುಂದೆಯೂ ಲಸಿಕೆ ಪಡೆಯುವ ಯೋಚನೆ ಇಲ್ಲ’ ಎಂದು ಈಜುಪಟು ಮೈಕಲ್‌ ಆ್ಯಂಡ್ರ್ಯೂ ತಿಳಿಸಿದ್ದರು. ಮೈಕಲ್‌ ನಿರ್ಧಾರವನ್ನು ಹಿರಿಯ ಈಜುಪಟು ಮಾಯಾ ಡಿರಾಡೊ ಟೀಕಿಸಿದ್ದಾರೆ.

ಪ್ರಜ್ಞೆ ಕಳೆದುಕೊಂಡ ಆರ್ಚರಿಪಟು

ಟೋಕಿಯೊದಲ್ಲಿ ತಾಪಮಾನ ಹೆಚ್ಚಿದ್ದು, ಸುಡು ಬಿಸಿಲಿನಿಂದಾಗಿ ರಷ್ಯಾದ ಆರ್ಚರಿಪಟು ಸ್ವೆಟ್ಲಾನ ಗೊಂಬೊಯೆವಾ ಸ್ಪರ್ಧೆಯ ವೇಳೆಯೇ ಪ್ರಜ್ಞೆತಪ್ಪಿದರು.

ಅರ್ಹತಾ ಸುತ್ತು ಪೂರ್ಣಗೊಳಿಸಿದ ಬಳಿಕ ಸ್ವೆಟ್ಲಾನ ಏಕಾಏಕಿ ಕುಸಿದು ಬಿದ್ದರು. ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಆರೈಕೆ ಮಾಡಿದರು.

‘ಈ ರೀತಿ ತಲೆ ತಿರುಗಿ ಬಿದ್ದಿದ್ದು ಇದೇ ಮೊದಲು. ವಿಪ‍ರೀತ ಬಿಸಿಲಿನಿಂದ ಹೀಗಾಗಿರಬಹುದು’ ಎಂದು ಸ್ವೆಟ್ಲಾನ ಪ್ರತಿಕ್ರಿಯಿಸಿದರು.

100ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡವರ ಪೈಕಿ ಹೊಸದಾಗಿ 19 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 106ಕ್ಕೆ ಏರಿದೆ. ಇದರಲ್ಲಿ 11 ಮಂದಿ ಅಥ್ಲೀಟ್‌ಗಳು ಸೇರಿದ್ದಾರೆ.

ಶುಕ್ರವಾರ ಸೋಂಕಿಗೊಳಪಟ್ಟವರಲ್ಲಿ ತಲಾ 3 ಮಂದಿ ಕ್ರೀಡಾಪಟುಗಳು ಹಾಗೂ ಪತ್ರಕರ್ತರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.