ADVERTISEMENT

Tokyo Olympics| ಮೀರಾಬಾಯಿ ಹೆಗಲ ಮೇಲೆ ನಿರೀಕ್ಷೆಯ ‘ಭಾರ’

ಟೋಕಿಯೊ ಒಲಿಂಪಿಕ್ಸ್‌ 2020 ಭಾರತದ ಕನಸಿನ ಪಯಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 18:40 IST
Last Updated 18 ಜುಲೈ 2021, 18:40 IST
ಮೀರಾಬಾಯಿ ಚಾನು –ಪಿಟಿಐ ಚಿತ್ರ
ಮೀರಾಬಾಯಿ ಚಾನು –ಪಿಟಿಐ ಚಿತ್ರ   

ಕಳೆದ ಬಾರಿ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇಬ್ಬರೂ ಪದಕದ ಭರವಸೆ ಮೂಡಿಸಿದ್ದರು. ಆದರೆ ನಿರೀಕ್ಷೆ ಹುಸಿಯಾಗಿತ್ತು. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಸತೀಶ್ ಶಿವಲಿಂಗಂ 11ನೇ ಸ್ಥಾನ ಗಳಿಸಿದರೆ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿ ಗಳಿಸಿದ್ದ ಮೀರಾಬಾಯಿ ಚಾನು ಮೂರು ಪ್ರಯತ್ನಗಳಲ್ಲೂ ವೈಫಲ್ಯ ಕಂಡು ಮರಳಿದ್ದರು. ಈ ಬಾರಿ ಮೀರಾಬಾಯಿ ಮತ್ತೆ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಟೋಕಿಯೊದಲ್ಲಿ ಭಾರತದ ಪರ ಭಾರ ಎತ್ತಲಿರುವ ಏಕೈಕ ಕ್ರೀಡಾಪಟು ಮೀರಾಬಾಯಿ ಚಾನು. 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ನಂತರ ಮುಂದಿನ ವರ್ಷ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಮೀರಾಬಾಯಿ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದರು.

ಕರ್ಣಂ ಮಲ್ಲೇಶ್ವರಿ ಹಾದಿಯ ಕನವರಿಕೆ

ADVERTISEMENT

ವೇಟ್‌ಲಿಫ್ಟಿಂಗ್ ಕ್ರೀಡೆ ಒಲಿಂಪಿಕ್ಸ್‌ನ ಮೊದಲ ಆವೃತ್ತಿಯಿಂದಲೇ ಇದೆ. ಆದರೆ ಭಾರತ ಈ ಕ್ರೀಡೆಯಲ್ಲಿ ಮೊದಲು ಪಾಲ್ಗೊಂಡದ್ದು 10ನೇ ಆವೃತ್ತಿಯಲ್ಲಿ, 1936ರಲ್ಲಿ. ಆ ವರ್ಷ ಭಾರತವನ್ನು ಪ್ರತಿನಿಧಿಸಿದ್ದು ಬರ್ಮಾ ಮೂಲದ ವು ಜಾ ವೇಕ್‌. ಭಾರತ ಮೂಲದ ಲಿಫ್ಟರ್ ಮೊದಲು ಪಾಲ್ಗೊಂಡದ್ದು 1948ರ ಲಂಡನ್‌ ಕೂಟದಲ್ಲಿ. ಈ ಕೀರ್ತಿಗೆ ಪಾತ್ರರಾದವರು ದಂಡಮುಂಡಿ ರಾಜಗೋಪಾಲ್. ಅವರು ಹೆಲ್ಸಿಂಕಿ ಮತ್ತು ಮೆಲ್ಬರ್ನ್‌ ಕೂಟಗಳಲ್ಲೂ ದೇಶವನ್ನು ಪ್ರತಿನಿಧಿಸಿದ್ದರು. 1936ರಿಂದ ಎಲ್ಲ ಕೂಟಗಳಲ್ಲಿ ಭಾರತ ಪಾಲ್ಗೊಂಡಿದ್ದರೂ ಪದಕ ಗೆಲ್ಲಲು ಯಾರಿಗೂ ಸಾಧ್ಯವಾಗಿರಲಿಲ್ಲ. 1984ರಲ್ಲಿ ಮಹೇಂದ್ರ ಕಣ್ಣನ್ ಮತ್ತು ದೇವನ್ ಗೋವಿಂದಸಾಮಿ ಮೊದಲ ಬಾರಿ ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದರು.

2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಗೆದ್ದು ಭಾರತಕ್ಕೆ ಮೊದಲ ಪದಕದ ಸವಿ ನೀಡಿದರು. 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಸ್ನ್ಯಾಚ್‌ನಲ್ಲಿ 110 ಕೆಜಿ ಸೇರಿದಂತೆ ಒಟ್ಟು 240 ಕೆಜಿ ಭಾರ ಎತ್ತಿದ್ದರು.

ಅವರು ಹಾಕಿಕೊಟ್ಟ ಹಾದಿಯಲ್ಲಿ ಮತ್ತೆ ಹೂ ಅರಳಲೇ ಇಲ್ಲ. ಮೀರಾಬಾಯಿ ಚಾನು ಈ ಶೂನ್ಯವನ್ನು ತುಂಬುವ ಭರವಸೆಯೊಂದಿಗೆ ಟೋಕಿಯೊ ತಲುಪಿದ್ದಾರೆ. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯಧಿಕ ಐದು ಮಂದಿಯ ತಂಡವನ್ನು ಕಣಕ್ಕೆ ಇಳಿಸಿತ್ತು. ಆದರೆ ದೇಶವನ್ನು ಒಬ್ಬರೇ ಪ್ರತಿನಿಧಿಸಿದ್ದು ಐದು ಬಾರಿ ಮಾತ್ರ. ಈ ವರ್ಷ ಮತ್ತೆ ಕೋಟಿ ಕೋಟಿ ಜನರ ಪದಕದ ನಿರೀಕ್ಷೆಯ ‘ಭಾರ’ ಅವರ ಹೆಗಲ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.