ADVERTISEMENT

ಒಲಿಂಪಿಕ್ಸ್ ಸಂಘಟನಾ ಸಮಿತಿ ಮುಖ್ಯಸ್ಥ ಮೊರಿ ರಾಜೀನಾಮೆ

ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ

ಏಜೆನ್ಸೀಸ್
Published 12 ಫೆಬ್ರುವರಿ 2021, 19:16 IST
Last Updated 12 ಫೆಬ್ರುವರಿ 2021, 19:16 IST
ರಾಜೀನಾಮೆ ಪ್ರಕಟಿಸುತ್ತಿರುವ ಯೋಶಿರೊ ಮೊರಿ–ರಾಯಿಟರ್ಸ್ ಚಿತ್ರ
ರಾಜೀನಾಮೆ ಪ್ರಕಟಿಸುತ್ತಿರುವ ಯೋಶಿರೊ ಮೊರಿ–ರಾಯಿಟರ್ಸ್ ಚಿತ್ರ   

ಟೋಕಿಯೊ: ಮಹಿಳೆಯರು ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಟೋಕಿಯೊ ಒಲಿಂಪಿಕ್ಸ್‌ ಸಂಘಟನಾ ಸಮಿತಿಯ ಮುಖ್ಯಸ್ಥ ಯೋಶಿರೊ ಮೊರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ‘ ಎಂದು ಶುಕ್ರವಾರ ನಡೆದ ಒಲಿಂಪಿಕ್ಸ್‌ ಸಮಿತಿಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಮೊರಿ ಪ್ರಕಟಿಸಿದ್ದಾರೆ.

ಫೆಬ್ರುವರಿ ಮೊದಲ ವಾರದಲ್ಲಿ ನಡೆದ ಜಪಾನ್‌ನ ಒಲಿಂಪಿಕ್ಸ್‌ ಮಂಡಳಿಯ ಸಭೆಯಲ್ಲಿ ಮಾತನಾಡಿದ್ದ ಮೊರಿ, ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ADVERTISEMENT

ಯೋಶಿರೊ ಮೊರಿ ಹೇಳಿಕೆಗೆ ಟೆನಿಸ್ ತಾರೆ ನವೊಮಿ ಒಸಾಕ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ರೂಚಿ ಸಕಮೊಟೊ ಸೇರಿದಂತೆ ಹಲವು ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಒಲಿಂಪಿಕ್ಸ್‌ ಪದಕ ವಿಜೇತರು, ಜಪಾನ್‌ನ ಕ್ರೀಡಾ ಅಧಿಕಾರಿಗಳು ಮತ್ತು ಟೋಕಿಯೊ ಒಲಿಂಪಿಕ್ಸ್ ಕಾರ್ಯಕರ್ತರು ಮೊರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ರಾಜೀನಾಮೆಗಾಗಿ ಆನ್‌ಲೈನ್‌ನಲ್ಲಿ ನಡೆದ ಅಭಿಯಾನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಸಹಿ ಮಾಡಿದ್ದರು. ಒತ್ತಡ ಹೆಚ್ಚಾಗುತ್ತಿದ್ದಂತೆ ತಮ್ಮ ಹೇಳಿಕೆ ಕುರಿತುಮೊರಿ ಕ್ಷಮೆ ಯಾಚಿಸಿದರೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು.

ಜಪಾನ್‌ನಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇಕಡಾ 80ರಷ್ಟು ನಾಗರಿಕರು ಒಲಿಂಪಿಕ್ಸ್ ರದ್ದು ಮಾಡಲು ಅಥವಾ ಮುಂದೂಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೊರಿ ಅವರ ರಾಜೀನಾಮೆಯಿಂದ ಪರಿಸ್ಥಿತಿ ತಿಳಿಗೊಂಡು, ಇನ್ನು ಕೇವಲ ಐದು ತಿಂಗಳ ಬಳಿಕ ಆರಂಭವಾಗಬೇಕಿರುವ ಟೋಕಿಯೊ ಕೂಟವನ್ನು ಆಯೋಜಿಸುವ ಕಡೆಗೆ ಗಮನ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಜುಲೈ 23ರಿಂದ ಒಲಿಂಪಿಕ್ಸ್ ಆರಂಭವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.