ADVERTISEMENT

Tokyo Olympics| ಈ ಆಟಗಾರರ ಮೇಲೆ ನೆಟ್ಟಿದೆ ಎಲ್ಲರ ಗಮನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 19:31 IST
Last Updated 22 ಜುಲೈ 2021, 19:31 IST
ನೊವಾಕ್‌ ಜೊಕೊವಿಚ್‌
ನೊವಾಕ್‌ ಜೊಕೊವಿಚ್‌   

ನೊವಾಕ್‌ ಜೊಕೊವಿಚ್‌

ವಿಶ್ವ ಟೆನಿಸ್‌ನ ‘ಚಕ್ರವರ್ತಿ’ ಜೊಕೊವಿಚ್‌, ಚೊಚ್ಚಲ ಚಿನ್ನದ ಕನಸಿನೊಂದಿಗೆ ಒಲಿಂಪಿಕ್ಸ್‌ ಅಭಿಯಾನ ಆರಂಭಿಸಲಿದ್ದಾರೆ. ಎಲ್ಲಾ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲೂ ಎರಡು ಹಾಗೂ ಅದಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ಸರ್ಬಿಯಾದ ಆಟಗಾರನಿಗೆ ಒಲಿಂಪಿಕ್ಸ್‌ ಚಿನ್ನ ಕೈಗೆಟುಕಿಲ್ಲ. ಆ ಕೊರಗು ನೀಗಿಸಿಕೊಳ್ಳುವ ವಿಶ್ವಾಸದಲ್ಲಿ ಅವರಿದ್ದಾರೆ.

ವಯಸ್ಸು: 34

ADVERTISEMENT

ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: 20

ಒಲಿಂಪಿಕ್ಸ್‌ ಸಾಧನೆ: ಕಂಚು (2008).

***

ನವೊಮಿ ಒಸಾಕ

ಜಪಾನ್‌ನ ಕುದಿರಕ್ತದ ಹುಡುಗಿ ಒಸಾಕ ತವರು ನೆಲದಲ್ಲೇ ಒಲಿಂಪಿಕ್ಸ್‌ಗೆ ಅಡಿ ಇಡಲು ಉತ್ಸುಕರಾಗಿದ್ದಾರೆ. ಒಸಾಕ, 2018ರ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್‌ ಅವರಂತಹ ಅನುಭವಿಯನ್ನೇ ಮಣಿಸಿ ಟೆನಿಸ್‌ ಲೋಕದ ಗಮನ ಸೆಳೆದಿದ್ದ ದಿಟ್ಟೆ. ಚೊಚ್ಚಲ ಪ್ರಯತ್ನದಲ್ಲೇ ಚಿನ್ನ ಗೆದ್ದು ಚೊಚ್ಚಲ ಒಲಿಂಪಿಕ್ಸ್‌ ಅನ್ನು ಸ್ಮರಣೀಯವಾಗಿಸಿಕೊಳ್ಳುವ ಸವಾಲು ಅವರ ಎದುರಿಗಿದೆ.

ವಯಸ್ಸು: 23

ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: 4.

***

ಅಲಿಸನ್‌ ಫೆಲಿಕ್ಸ್‌

ಅಥ್ಲೆಟಿಕ್ಸ್‌ನಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿರುವ ತಾರೆ ಫೆಲಿಕ್ಸ್‌. ಒಲಿಂಪಿಕ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಅತಿಹೆಚ್ಚು ಪದಕಗಳನ್ನು ಜಯಿಸಿದ ಏಕೈಕ ಓಟಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು. ತಾಯಿಯಾದ ಮೇಲೂ ಅಥ್ಲೆಟಿಕ್ಸ್‌ ಪಯಣ ಮುಂದುವರಿಸಿರುವ ಅವರು ಟೋಕಿಯೊದಲ್ಲೂ ಪದಕ ಕೊರಳಿಗೇರಿಸಿಕೊಳ್ಳುವ ಕನವರಿಕೆಯಲ್ಲಿದ್ದಾರೆ.

ವಯಸ್ಸು: 35

ಒಲಿಂಪಿಕ್ಸ್‌ ಸಾಧನೆ: ಒಟ್ಟು 6 ಚಿನ್ನ (2008, 2012, 2016), ಮೂರು ಬೆಳ್ಳಿ (2004, 2008, 2016)

***

ಎಲ್ಯೂಡ್‌ ಕಿಪ್‌ಚೊಗ್‌

‘ಮ್ಯಾರಥಾನ್‌ ಮಾಸ್ಟರ್‌’ ಎಂದೇ ಹೆಸರಾಗಿರುವವರು ಕಿಪ್‌ಚೊಗ್‌. ಎರಡು ಗಂಟೆಯೊಳಗೆ ಮ್ಯಾರಥಾನ್‌ ಪೂರ್ಣಗೊಳಿಸಿದ ಹಿರಿಮೆ ಅವರದ್ದು. 5,000 ಮೀಟರ್ಸ್‌ ಓಟದಲ್ಲೂ ಅವರು ಹೆಜ್ಜೆ ಗುರುತು ಮೂಡಿಸಿದ್ದಾರೆ. ವಿಶ್ವ ಮ್ಯಾರಥಾನ್‌ನಲ್ಲಿ 8 ಚಿನ್ನದ ಪದಕಗಳನ್ನೂ ಅವರು ಕೊರಳಿಗೇರಿಸಿಕೊಂಡಿದ್ದಾರೆ.

ವಯಸ್ಸು: 36

ಒಲಿಂಪಿಕ್ಸ್‌ ಸಾಧನೆ: ಚಿನ್ನ (2016), ಬೆಳ್ಳಿ (2008), ಕಂಚು (2004).

***

ಶೆಲ್ಲಿ ಆ್ಯನ್‌ ಫ್ರೇಸರ್‌

‘ಪಾಕೆಟ್‌–ರಾಕೆಟ್‌’ ಎಂದೇ ಪ್ರಸಿದ್ಧರಾಗಿರುವ ಶೆಲ್ಲಿ ಒಲಿಂಪಿಕ್ಸ್‌ನ 100 ಮೀಟರ್ಸ್‌ ಓಟದಲ್ಲಿ 3ನೇ ಚಿನ್ನ ಗೆದ್ದ ಓಟಗಾರ್ತಿ ಎಂಬ ದಾಖಲೆ ನಿರ್ಮಿಸಲು ಸಿದ್ಧರಾಗಿದ್ದಾರೆ. ಟೋಕಿಯೊ ಕೂಟದಲ್ಲಿ ಅವರಿಂದ ಈ ಸಾಧನೆ ಅರಳುವ ನಿರೀಕ್ಷೆ ಇದೆ. ಜಮೈಕಾದ ಈ ತಾರೆ ಜೂನ್‌ನಲ್ಲಿ ನಡೆದಿದ್ದ ಸ್ಪರ್ಧೆಯೊಂದರಲ್ಲಿ 10.63 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಗಮನ ಸೆಳೆದಿದ್ದರು.

ವಯಸ್ಸು: 34

ಒಲಿಂಪಿಕ್ಸ್‌ ಸಾಧನೆ: 2 ಚಿನ್ನ (2008, 2012), 3 ಬೆಳ್ಳಿ (2012, 2016), 1 ಕಂಚು (2016).

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.