ADVERTISEMENT

ಸೈಫಾನ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌: ಮೈಸೂರಿನ ತಾನ್ಯಾ ಚಾಂಪಿಯನ್‌

ಪಿಟಿಐ
Published 16 ಆಗಸ್ಟ್ 2025, 14:48 IST
Last Updated 16 ಆಗಸ್ಟ್ 2025, 14:48 IST
<div class="paragraphs"><p>ತಾನ್ಯಾ ಹೇಮಂತ್‌ </p></div>

ತಾನ್ಯಾ ಹೇಮಂತ್‌

   

ಪ್ರಜಾವಾಣಿ ಸಂಗ್ರಹ ಚಿತ್ರ

ನವದೆಹಲಿ: ಭಾರತದ ಉದಯೋನ್ಮುಖ ತಾರೆ ತಾನ್ಯಾ ಹೇಮಂತ್‌ ಅವರು ಸೈಫಾನ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ನಲ್ಲಿ ಜಪಾನ್‌ನ ಕನೆ ಸಕೈ ಅವರನ್ನು ನೇರ ಗೇಮ್‌ಗಳಿಂದ ಮಣಿಸಿ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

ಮೈಸೂರಿನ 21 ವರ್ಷದ ತಾನ್ಯಾ, ಉತ್ತರ ಮರೀನಾ ದ್ವೀಪಗಳ ಒಲೈ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 15-10, 15-8ರಿಂದ ಜಪಾನ್‌ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು. ಇದರೊಂದಿಗೆ ತಮ್ಮ ನಾಲ್ಕನೇ ಇಂಟರ್‌ನ್ಯಾಷನಲ್ ಸರಣಿಯ ಪ್ರಶಸ್ತಿಗೆ ಮುತ್ತಿಕ್ಕಿದರು.

ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ ಭಾಗವಾಗಿರುವ ಸೈಪಾನ್ ಟೂರ್ನಿಯಲ್ಲಿ ಪ್ರಾಯೋಗಿಕವಾಗಿ 3x15 ಸ್ಕೋರಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇಲ್ಲಿ ಪ್ರತಿ ಗೇಮ್‌ನಲ್ಲಿ ಸಾಂಪ್ರದಾಯಿಕ 21ರ ಬದಲು 15 ಅಂಕಗಳಿಗೆ ಆಡಿಸಲಾಗುತ್ತದೆ.

ವಿಶ್ವದ 86ನೇ ಕ್ರಮಾಂಕದ ತಾನ್ಯಾ ಅವರು ಈ ಹಿಂದೆ ಇಂಡಿಯಾ ಇಂಟರ್‌ನ್ಯಾಷನಲ್ (2022), ಇರಾನ್ ಫಜ್ರ್ ಇಂಟರ್‌ನ್ಯಾಷನಲ್ (2023) ಮತ್ತು ಬೆಂಡಿಗೊ ಇಂಟರ್‌ನ್ಯಾಷನಲ್ (2024) ಪ್ರಶಸ್ತಿ ಜಯಿಸಿದ್ದರು. ಕಳೆದ ವರ್ಷ ಅಜರ್‌ಬೈಜಾನ್ ಇಂಟರ್‌ನ್ಯಾಷನಲ್‌ನಲ್ಲಿ ಅವರು ರನ್ನರ್ ಅಪ್ ಆಗಿದ್ದರು. ಫೈನಲ್‌ನಲ್ಲಿ ಸ್ವದೇಶದ ಮಾಳವಿಕಾ ಬನ್ಸೋಡ್ ವಿರುದ್ಧ ಸೋತಿದ್ದರು.

ಸೈಪಾನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ತಾನ್ಯಾ ಸೆಮಿಫೈನಲ್‌ನಲ್ಲಿ ಜಪಾನ್‌ನ ರಿರಿನಾ ಹಿರಮೊಟೊ ವಿರುದ್ಧ, ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಪುರದ ಲೀ ಕ್ಸಿನ್ ಯಿ ಮೇಗನ್ ವಿರುದ್ಧ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ನೋಡೋಕಾ ಸುನಕಾವಾ ವಿರುದ್ಧ ಗೆಲುವು ಸಾಧಿಸಿದ್ದರು. ಆರಂಭಿಕ ಸುತ್ತಿನಲ್ಲಿ ಅವರು ಬೈ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.