ADVERTISEMENT

ಒಲಿಂಪಿಕ್‌ ಪದಕ ಗೆಲ್ಲಬಲ್ಲ 32 ಕ್ರೀಡಾಳುಗಳಿಗೆ ತರಬೇತಿ: ಬಿಎಸ್‌ವೈ

ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರಕ್ಕೆ 'ಖೇಲೋ ಇಂಡಿಯಾ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 19:30 IST
Last Updated 22 ಡಿಸೆಂಬರ್ 2020, 19:30 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ‘ರಾಜ್ಯದಲ್ಲಿ ಕ್ರೀಡಾ ಹಾಸ್ಟೆಲ್‌ಗಳು ಮತ್ತು ಇತರ ಸಂಘಸಂಸ್ಥೆಗಳಿಂದ ಒಲಿಂಪಿಕ್ ಪದಕ ಗೆಲ್ಲಬಲ್ಲ ಸಾಮರ್ಥ್ಯ ಇರುವ 32 ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿಗೆ ಆಯ್ಕೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ (ಸ್ವತಂತ್ರ ಪ್ರಭಾರ) ಕಿರಣ್ ರಿಜಿಜು ಜತೆ ನಗರದ ವಿದ್ಯಾನಗರದಲ್ಲಿರುವ ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರವನ್ನು ಮಂಗಳವಾರ ‘ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ’ವೆಂದು ಘೋಷಿಸಿದ ಬಳಿಕ ಮುಖ್ಯಮಂತ್ರಿ ಮಾತನಾಡಿದರು.

ದೇಶದ 8 ರಾಜ್ಯಗಳ ಕ್ರೀಡಾ ಕೇಂದ್ರಗಳಿಗೆ ಈ ಮಾನ್ಯತೆ ದೊರೆತಿದೆ. ಬೆಂಗಳೂರು ಕೇಂದ್ರದಲ್ಲಿ ಈಜು, ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ.

ADVERTISEMENT

ಕಿರಣ್ ರಿಜಿಜು ಮಾತನಾಡಿ, ‘ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರಗಳಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಒದಗಿಸುವ ಮೂಲಕ ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯ ದೇಶವಾಗಿ ರೂಪಿಸಲು ಉದ್ದೇಶಿಸಲಾಗಿದೆ. ಅರುಣಾಚಲ ಪ್ರದೇಶ, ಕೇರಳ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಕ್ರೀಡಾ ಸಚಿವರು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಿಂಪಿಕ್ಸ್ ಶೂಟರ್ ಪಿ.ಎನ್. ಪ್ರಕಾಶ್, ಹಾಕಿ ಆಟಗಾರ ವಿ.ಆರ್. ರಘುನಾಥ್ ಇದ್ದರು.

ಕೇಂದ್ರ ಸರ್ಕಾರವು ಈ ಕೇಂದ್ರದಲ್ಲಿ ಕ್ರೀಡಾ ಸಲಕರಣೆಗಳು, ಜಿಮ್‌ ಉಪಕರಣಗಳನು ಖರೀದಿ, ‘ಕ್ರೀಡಾ ವಿಜ್ಞಾನ ಮೌಲ್ಯಮಾಪ ಕೇಂದ್ರ‘ ಆರಂಭ ಮತ್ತಿತರ ವೆಚ್ಚಗಳನ್ನು ಭರಿಸಲು ಅನುದಾನ ನೀಡುತ್ತದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ರಾಷ್ಟ್ರೀಯ ಯುವ ಜನ ಕೇಂದ್ರವು 68 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಕ್ರೀಡಾ ವಸತಿ ಶಾಲೆ, ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್‌ ಟ್ರ್ಯಾಕ್‌, ಆಯುರ್ವೇದಿಕ್ ಆರೋಗ್ಯ ಕೇಂದ್ರ, ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.