ADVERTISEMENT

ಪ್ರವಾಸಕ್ಕೆ ಅಡ್ಡಿ: ಛೋಪ್ರಾ ಒಲಿಂಪಿಕ್ಸ್ ಕನಸಿಗೆ ಧಕ್ಕೆ

ರಾಯಿಟರ್ಸ್
Published 12 ಮೇ 2021, 11:07 IST
Last Updated 12 ಮೇ 2021, 11:07 IST
ನೀರಜ್ ಚೋಪ್ರಾ –ರಾಯಿಟರ್ಸ್ ಚಿತ್ರ
ನೀರಜ್ ಚೋಪ್ರಾ –ರಾಯಿಟರ್ಸ್ ಚಿತ್ರ   

ನವದೆಹಲಿ: ಭಾರತದ ಜಾವೆಲಿನ್ ಪಟು ನೀರಜ್ ಛೋಪ್ರಾ ಅವರು ಒಲಿಂಪಿಕ್ಸ್ ಕನಸಿನೊಂದಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಕೋವಿಡ್‌–19ರಿಂದಾಗಿ ಉಂಟಾಗಿರುವ ಪ್ರಯಾಣ ನಿರ್ಬಂಧಗಳು ಪದಕ ಗೆಲ್ಲಲು ಅಡ್ಡಿಯಾಗುವ ಆತಂದಲ್ಲಿದ್ದಾರೆ ಅವರು.

ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವರು ಅರ್ಹತೆ ಗಳಿಸಿದ್ದರು. ಆದರೆ 23 ವರ್ಷದ ಛೋಪ್ರಾ ಅವರಿಗೆ ಆನಂತರ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ. ಮೊಣಕೈಗೆ ಗಾಯಗೊಂಡಿದ್ದ ಕಾರಣ 2019ರಲ್ಲೂ ಅವರಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಪಟಿಯಾಲದಲ್ಲಿ ನಡೆದಿದ್ದ ದೇಶಿ ಕೂಟವೊಂದರಲ್ಲಿ 88.07 ಮೀಟರ್ ದೂರ ಎಸೆಯುವುದರೊಂದಿಗೆ ಚೋಪ್ರಾ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದ್ದರು. ಆದರೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಿಗಳನ್ನು ಎದುರಿಸಲು ಅವರಿ ಅವಕಾಶ ಸಿಗಲಿಲ್ಲ.

ADVERTISEMENT

ಭಾರತದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವಂತೆ ಅನೇಕ ದೇಶಗಳು ಭಾರತದಿಂದ ತೆರಳುವವರ ಮೇಲೆ ನಿರ್ಬಂಧ ಹೇರಿದ್ದವು. ಕೆಲವು ದೇಶಗಳಲ್ಲಿ ಭಾರತದಿಂದ ತೆರಳುವವರು ಸುದೀರ್ಘ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ.

‘ತರಬೇತಿಯಂತೆಯೇ ಸ್ಪರ್ಧೆಯೂ ಅತಿ ಮುಖ್ಯ. ನನಗೆ ಸದ್ಯ ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ವಿದೇಶದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಸ್ಪರ್ಧೆಗಳಿಗೆ ಕೊರತೆಯೇ ಇರಲಿಲ್ಲ. ಪ್ರತಿ ಎರಡು ವಾರಗಳಿಗೊಮ್ಮೆ ಯಾವುದಾದರೊಂದು ಸ್ಪರ್ಧೆ ಇದ್ದೇ ಇರುತ್ತದೆ. ಅದರಿಂದ ನಾನೀಗ ವಂಚಿತನಾಗಿದ್ದೇನೆ ಎನಿಸುತ್ತದೆ’ ಎಂದು ವರ್ಚುವಲ್‌ ಪತ್ರಿಕಾ ಸಂವಾದದಲ್ಲಿ ನೀರಜ್ ಹೇಳಿದ್ದಾರೆ.

ಈ ತಿಂಗಳಲ್ಲಿ ಟರ್ಕಿಯಲ್ಲಿ ತರಬೇತಿ ಪಡೆಯಲು ನೀರಜ್ ಹೋಗಬೇಕಾಗಿತ್ತು. ಆದರೆ ಅಲ್ಲಿ ಎರಡು ವಾರ ಕ್ವಾರಂಟೈನ್‌ನಲ್ಲಿರಬೇಕಾಗಿರುವುದರಿಂದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈಗ ಪಟಿಯಾಲದಲ್ಲಿ ಅಭ್ಯಾಸನಿರತರಾಗಿದ್ದಾರೆ. ಅಲ್ಲಿ ಬಿಸಿಲಿನ ತಾಪ ವಿಪರೀತವಾಗಿದೆ. ಜೂನ್‌ನಲ್ಲಿ ಬಿಸಿಲು ಕಡಿಮೆಯಾಗುವ ಸಾಧ್ಯತೆ ಇದ್ದು ಆ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಸಾಧ್ಯ ಎಂಬ ಭರವಸೆ ಅವರದು.

ಜಪಾನ್ ಕ್ರೀಡಾಪಟುಗಳಿಗೆ ಲಸಿಕೆ

ಟೋಕಿಯೊ (ಎಎಫ್‌ಪಿ): ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಜಪಾನ್‌ನ ಎಲ್ಲ ಕ್ರೀಡಾಪಟುಗಳಿಗೆ ಕೋವಿಡ್‌–19 ಸಿಗಲಿದೆ. ಈ ವಿಷಯವನ್ನು ಬುಧವಾರ ವರದಿಯಾಗಿದ್ದು ಒಲಿಂಪಿಕ್ಸ್‌ ಸ್ಪರ್ಧಾಳುಗಳಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ನಿಕ್ಕಿ ಮತ್ತು ಯೊಮಿವುರಿ ಶಿಂಬುಮ್‌ ದಿನಪತ್ರಿಕೆಗಳಲ್ಲಿ ಈ ಕುರಿತು ಸುದ್ದಿ ಪ್ರಕಟವಾಗಿದೆ. ಆದರೆ ಇದನ್ನು ಸರ್ಕಾರವಾಗಲಿ, ಒಲಿಂಪಿಕ್ಸ್ ಆಯೋಜಕರಾಗಲಿ ಜಪಾನ್ ಒಲಿಂಪಿಕ್ಸ್ ಸಮಿತಿಯಾಗಲಿ ಸ್ಪಷ್ಟಪಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.