ADVERTISEMENT

ಕ್ರಿಕೆಟರ್‌ಗಳ ಪರಿಶ್ರಮವೇ ನನ್ನ ಸಾಧನೆಗೆ ಸ್ಫೂರ್ತಿ: ಉಸೇನ್‌ ಬೋಲ್ಟ್‌

ಪಿಟಿಐ
Published 26 ಸೆಪ್ಟೆಂಬರ್ 2025, 10:56 IST
Last Updated 26 ಸೆಪ್ಟೆಂಬರ್ 2025, 10:56 IST
   

ಮುಂಬೈ: ನನ್ನ ಸಾಧನೆಗೆ ಕ್ರಿಕೆಟ್‌ ಆಟಗಾರರ ಪರಿಶ್ರಮವೇ ಸ್ಪೂರ್ತಿಯಾಗಿದೆ. ಅವರು ಕ್ರೀಡಾಂಗಣದಲ್ಲಿ ಸರ್ವಸ್ವವನ್ನು ನೀಡುವುದನ್ನು ನೋಡುತ್ತಲೇ ನಾನು ಅವರ ಹಾದಿಯಲ್ಲಿ ಸಾಗಲು ಪ್ರಯತ್ನಿಸಿದ್ದೆ ಎಂದು ಜಗತ್ತಿನ ವೇಗದ ಓಟಗಾರ ಖ್ಯಾತಿಯ ಉಸೇನ್‌ ಬೋಲ್ಟ್‌ ಅವರು ಹೇಳಿದ್ದಾರೆ.

‘ನಾನು ಅತಿ ದೊಡ್ಡ ಕ್ರಿಕೆಟ್‌ ಅಭಿಮಾನಿ. ಕ್ರಿಕೆಟ್‌ ಪಂದ್ಯಗಳನ್ನು ನೋಡುತ್ತಲೇ ನನ್ನ ಬಾಲ್ಯವನ್ನು ಕಳೆದಿದ್ದೇನೆ. ಕ್ರಿಕೆಟಿಗರು ತಮ್ಮ ಪರಿಶ್ರಮದ ಮೂಲಕ ಬೆಳೆಯುವುದನ್ನು ಗಮನಿಸುತ್ತಾ, ನಾನು ಕೂಡ ಅವರ ದಾರಿಯಲ್ಲಿ ಸಾಗಲು ಪ್ರಯತ್ನಿಸಿದ್ದೇನೆ’ ಎಂದು ಬೋಲ್ಟ್‌ ತಿಳಿಸಿದ್ದಾರೆ.

ಕಠಿಣ ಪರಿಶ್ರಮ ಮತ್ತು ಕ್ರೀಡೆಗಾಗಿ ಸಮರ್ಪಣೆ ಮಾಡಿಕೊಂಡಿದ್ದರಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಾಯಿತು. ನಾನು ಓಡುವುದನ್ನು ಇಷ್ಟಪಡುತ್ತೇನೆ, ನಾನು ಜಗತ್ತಿನ ನಂಬರ್‌ ಒನ್‌ ಓಟಗಾರನಾಗುವ ಗುರಿ ಹೊಂದಿದ್ದೆ. ಸತತ ಪರಿಶ್ರಮದಿಂದ ಅದು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ADVERTISEMENT

ಕ್ರಿಸ್‌ ಗೇಲ್‌, ಮೈಕೆಲ್ ಹೋಲ್ಡಿಂಗ್, ಕೋರ್ಟ್ನಿ ವಾಲ್ಷ್ ಸೇರಿದಂತೆ ಹಲವು ತಾರಾ ಕ್ರಿಕೆಟಿಗರು ಉಸೇನ್‌ ಬೋಲ್ಟ್‌ ಅವರ ಸ್ವದೇಶ ಜಮೈಕಾ ಮೂಲದವರಾಗಿದ್ದಾರೆ.

ಓಲಂಪಿಕ್ಸ್‌ನಲ್ಲಿ 8 ಚಿನ್ನ ಹಾಗೂ 11 ವಿಶ್ವ ಚಾಂಪಿಯನ್‌ಶಿಪ್‌ ಚಿನ್ನದ ಪದಕಗಳನ್ನು ಗೆದ್ದಿದ್ದ ಉಸೇನ್‌ ಬೋಲ್ಟ್‌, ಕೇವಲ 9.58 ಸೆಕೆಂಡ್‌ಗಳಲ್ಲಿ 100 ಮೀ ಓಟವನ್ನು ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದಿದ್ದರು. ಅವರು 2017ರಲ್ಲಿ ನಿವೃತ್ತಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.