ADVERTISEMENT

ಬಡತನವೇ ಬಡಿದೆಬ್ಬಿಸಿತು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಉಷಾ ರಾಣಿ
ಉಷಾ ರಾಣಿ   

* ಕಬಡ್ಡಿಯಲ್ಲಿ ನಿಮಗೆ ಆಸಕ್ತಿ ಮೂಡಿದ ಬಗೆಯನ್ನು ವಿವರಿಸುತ್ತೀರಾ?
ಪ್ರಥಮ ಪಿಯುಸಿಓದುತ್ತಿರುವಾಗಲೇ ನನಗೆ ಈ ಕ್ರೀಡೆಯಲ್ಲಿ ಆಸಕ್ತಿ ಮೂಡಿತು. ಆಗಿನಿಂದ ಕಬಡ್ಡಿಯಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಈ ಹಂತಕ್ಕೆ ಬೆಳೆದಿದ್ದೇನೆ.

* ಕಬಡ್ಡಿ ಆಟದಲ್ಲಿ ತೊಡಗಿಸಿಕೊಂಡಾಗ ಎದುರಿಸಿದ ಸಮಸ್ಯೆಗಳು ಏನೇನು?
ಇಬ್ಬರು ತಮ್ಮಂದಿರು, ಅಕ್ಕ–ತಂಗಿ ಇರುವ ದೊಡ್ಡ ಕುಟುಂಬ ನಮ್ಮದು. ಪೊಲೀಸ್ ಇಲಾಖೆಯಲ್ಲಿದ್ದ ತಂದೆ ಅನಾರೋಗ್ಯದಿಂದ ರಾಜೀನಾಮೆ ನೀಡಿದ ನಂತರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಜೀವನ ನಿರ್ವಹಣೆಗಾಗಿ ಅಮ್ಮ ಹೂಕಟ್ಟುವ ಕೆಲಸ ಮಾಡಿದರು. ಜೀವನದಲ್ಲಿ ಸಾಧನೆ ಮಾಡಿದರೆ ಮಾತ್ರ ಕಷ್ಟ ಕಳೆಯಲು ಸಾಧ್ಯ ಎಂದೆನಿಸಿತು. ಹೀಗಾಗಿ ಕಬಡ್ಡಿಯಲ್ಲಿ ಲಭಿಸಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡೆ.

* ಏಷ್ಯನ್ ಕ್ರೀಡಾಕೂಟಕ್ಕೆ ನಡೆದ ತಯಾರಿ ಬಗ್ಗೆ ವಿವರಿಸಿ
ಏಷ್ಯನ್‌ ಕ್ರೀಡಾಕೂಟಕ್ಕೆ ಆರು ತಿಂಗಳಿಂದ ತಯಾರಿ ನಡೆದಿತ್ತು. ದೆಹಲಿ, ಭೋಪಾಲ್‌ ಮತ್ತಿತರ ಕಡೆಗಳಲ್ಲಿ ತರಬೇತಿ ಶಿಬಿರ ನಡೆದಿತ್ತು. ಇಲಾಖೆಯಿಂದ ನನಗೆ ಪೂರ್ಣ ಸಹಕಾರ ಸಿಗುತ್ತಿದೆ.

ADVERTISEMENT

* ಏಷ್ಯನ್‌ ಕ್ರೀಡಾಕೂಟದ ಫೈನಲ್‌ನಲ್ಲಿ ಕಣಕ್ಕೆ ಇಳಿಯುವಾಗ ಏನನಿಸಿತ್ತು?
ಎದುರಾಳಿಗಳು ಬಲಿಷ್ಟವಾಗಿದ್ದರು. ಹೀಗಾಗಿ ತುರುಸಿನ ಸ್ಪರ್ಧೆ ಎದುರಾಗಿಗಿತ್ತು. ಗೆಲ್ಲಲೇಬೇಕೆನ್ನುವ ಛಲ ಇತ್ತು. ಹೀಗಾಗಿ ಲಭಿಸಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡೆ.

* ಪೊಲೀಸ್‌ ಇಲಾಖೆಯ ಉದ್ಯೋಗದ ಜೊತೆಯಲ್ಲಿ ಕಬಡ್ಡಿಯಲ್ಲಿ ತೊಡಗಿಸಿಕೊಂಡಿದ್ದೀರಿ. ಇದು ಸವಾಲು ಎನಿಸಲಿಲ್ಲವೇ?
ಕ್ರೀಡಾ ಕೋಟಾದಡಿ ನನ್ನನ್ನು ಆಯ್ಕೆ ಮಾಡಲಾಗಿತ್ತು. ಆದ್ದರಿಂದ ಉದ್ಯೋಗದ ಜೊತೆಯಲ್ಲಿ ಕಬಡ್ಡಿಯಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶ ಸಿಗುತ್ತಿದೆ.

* ಈ ಕ್ರೀಡೆಯಲ್ಲಿ ತೊಡಗಲು ನಿಮಗೆ ಸ್ಫೂರ್ತಿ ಯಾರು?
ಕಬಡ್ಡಿಯಲ್ಲಿ ಆಸಕ್ತಿ ಹುಟ್ಟಿಸಿದವರು ತಂದೆ.ಅವರೂ ಕಬಡ್ಡಿ ಆಟಗಾರ ಆಗಿದ್ದರು. ಮನೆಯ ಹತ್ತಿರ ಮಾತಾ ಕಬಡ್ಡಿ ಕ್ಲಬ್‌ ಇರುವುದರಿಂದ ನನಗೆ ಅಭ್ಯಾಸ ಮಾಡಲು ಅನುಕೂಲ ಆಯಿತು.

* ಏಷ್ಯನ್‌ ಕೂಟದಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗದೇ ಇರುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ನೀವೇನನ್ನುತ್ತೀರಿ?
ಎಲ್ಲ ತಂಡಗಳು ಕೂಡ ಗೆಲ್ಲಬೇಕು ಎಂಬ ಬಯಕೆ ಹೊತ್ತುಕೊಂಡೇ ಬಂದಿರುತ್ತವೆ. ಆದ್ದರಿಂದ ಸ್ಪರ್ಧೆಯಲ್ಲಿ ಸೋಲು–ಗೆಲುವು ಸಹಜ. ಹೀಗಾಗಿ ಎರಡನ್ನೂ ಸಮಾನವಾಗಿ ಕಾಣುವ ಮನಸ್ಸು ಇರಬೇಕು. ಚಿನ್ನ ಗೆಲ್ಲುವುದಕ್ಕಾಗಿ ನಾವು ಕೂಡ ಸಾಕಷ್ಟು
ಪ್ರಯತ್ನ ಮಾಡಿದ್ದೇವೆ. ಆದರೆ ಜಯ ನಮಗೆ ಒಲಿಯಲಿಲ್ಲ.

* ಯುವ ಮಹಿಳಾ ಕಬಡ್ಡಿಪಟುಗಳಿಗೆ ನಿಮ್ಮ ಸಲಹೆ ಏನು?
ಮಹಿಳೆಯರು ಸತತ ಪ್ರಯತ್ನ ಮಾಡುವುದರಿಂದ ಗುರಿ ಸಾಧಿಸಬಲ್ಲರು. ಶ್ರದ್ಧೆಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಸಿಗುತ್ತದೆ. ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠವಾಗಿರುವುದಕ್ಕೂ ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.