ಆರ್.ವೈಶಾಲಿ
ಪಿಟಿಐ ಚಿತ್ರ
ಸ್ಟಾವೆಂಜರ್ (ನಾರ್ವೆ): ಭಾರತದ ಯುವ ಆಟಗಾರ್ತಿ, ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿ, ಸ್ವದೇಶದ ಅನುಭವಿ ಆಟಗಾರ್ತಿ ಕೋನೇರು ಹಂಪಿ ಅವರನ್ನು ಸೋಲಿಸಿ ನಾರ್ವೆ ಚೆಸ್ ಟೂರ್ನಿಯ ನಂತರ ಮಹಿಳಾ ವಿಭಾಗದಲ್ಲಿ ಮಂಗಳವಾರ ಅಗ್ರಸ್ಥಾನಕ್ಕೇರಿದರು. ಎರಡು ಸುತ್ತುಗಳ ನಂತರ ಅವರು ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಚೀನಾದ ಟಿಂಗ್ಜಿ ಲೀ, ವಿಶ್ವ ಚಾಂಪಿಯನ್ ಜು ವೆನ್‌ಜುನ್, ಉಕ್ರೇನ್‌ನ ಅನ್ನಾ ಮುಝಿಚುಕ್ ಮತ್ತು ಸ್ವೀಡನ್‌ನ ಪಿಯಾ ಕ್ರಾಮ್ಲಿಂಗ್ ಐದರವೆಗಿನ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಹಂಪಿ (1.5 ಪಾಯಿಂಟ್ಸ್) ಕೊನೆಯ ಸ್ಥಾನದಲ್ಲಿದ್ದಾರೆ. ಆರು ಮಂದಿ ಆಟಗಾರ್ತಿಯರ ಈ ಟೂರ್ನಿ ರೌಂಡ್‌ರಾಬಿನ್ ಮಾದರಿಯಲ್ಲಿ ನಡೆಯುತ್ತಿದೆ.
ಪುರುಷರ ವಿಭಾಗದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಮೂರು ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ. ಈ ವಿಭಿನ್ನ ಟೂರ್ನಿಯಲ್ಲಿ ಡ್ರಾ ಆದ ಪಂದ್ಯಗಳನ್ನು ‘ಆರ್ಮ್‌ಗೆಡನ್’ ಮಾದರಿಯಲ್ಲಿ ನಿರ್ಧರಿಸಲಾಗುತ್ತದೆ. ಈ ಮಾದರಿಯಲ್ಲಿ ಬಿಳಿ ಕಾಯಿಗಳಿಗೆ 10 ನಿಮಿಷ, ಕಪ್ಪು ಕಾಯಿಗಳನ್ನು ಆಡುವ ಆಟಗಾರನಿಗೆ 7 ನಿಮಿಷ ಇರುತ್ತದೆ. ಒಂದೊಮ್ಮೆ ಪಂದ್ಯ ಡ್ರಾ ಆದರೆ ಕಪ್ಪು ಕಾಯಿಗಳಲ್ಲಿ ಆಡುವ ಆಟಗಾರ ವಿಜೇತ ಎನಿಸುತ್ತಾನೆ.
ಎರಡನೇ ಸುತ್ತಿನಲ್ಲಿ ಅವರು ಹಿಕಾರು ನಕಾಮುರಾ ವಿರುದ್ಧ ಆಡಿದರು. ಟೂರ್ನಿಯಲ್ಲಿರುವ ಭಾರತದ ಏಕೈಕ ಆಟಗಾರ ಪ್ರಜ್ಞಾನಂದ ಎರಡನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಎದುರು ಸೋಲನುಭವಿಸಿದರು.
ಪ್ರಜ್ಞಾನಂದ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಫ್ರಾನ್ಸ್‌ನ ಅಲಿರೇಝಾ ಫಿರೋಝ್, ಹಿಕಾರು ನಕಾಮುರಾ ಮತ್ತು ಡಿಂಗ್ ಲಿರೆನ್ ತಲಾ 2.5 ಪಾಯಿಂಟ್ಸ್ ಕಲೆಹಾಕಿದ್ದಾರೆ. ಫ್ಯಾಬಿಯಾನೊ ಕರುವಾನಾ (2 ಪಾಯಿಂಟ್ಸ್) ಕೊನೆಯ ಸ್ಥಾನದಲ್ಲಿದ್ದಾರೆ.
ಕರುವಾನಾ ಮತ್ತು ಫಿರೋಝ್ ಕ್ಲಾಸಿಕಲ್ ಪಂದ್ಯ ‘ಡ್ರಾ’ ಮಾಡಿದರು. ಆದರೆ ಫಿರೋಜ್ ಅವರು ಆರ್ಮ್‌ಗೆಡನ್‌ನಲ್ಲಿ ಮೇಲುಗೈ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.