2004ರಲ್ಲಿ ನಡೆದ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ (ಎಡದಿಂದ) ಫಿಸಿಯೊ ಸಂಜಯ್ ಸಿಂಗ್, ಟೆನಿಸ್ ಆಟಗಾರ ಮಹೇಶ್ ಭೂಪತಿ, ಲಿಯಾಂಡರ್ ಪೇಸ್ ಅವರೊಂದಿಗೆ ವೇಸ್ ಪೇಸ್
ಪ್ರಜಾವಾಣಿ ಸಂಗ್ರಹ ಚಿತ್ರ: ಕೆ.ಎನ್. ಶಾಂತಕುಮಾರ್
ಬೆಂಗಳೂರು: ‘ಅಪ್ಪಾ, ಈಗ ನಿಮ್ಮೊಂದಿಗೆ ಊಟಕ್ಕೆ ಕುಳಿತುಕೊಳ್ಳಲು ನಾನು ಅರ್ಹ..’
ಆಗಷ್ಟೇ ಅಟ್ಲಾಂಟಾ ಒಲಿಂಪಿಕ್ಸ್ (1996) ನಲ್ಲಿ ಕಂಚಿನ ಪದಕ ಜಯಿಸಿ ಬಂದಿದ್ದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ತಮ್ಮ ತಂದೆ ಡಾ. ವೇಸ್ ಪೇಸ್ ಅವರ ಮುಂದೆ ಹೆಮ್ಮೆಯಿಂದ ನಿಂತಿದ್ದರು. ಒಲಿಂಪಿಯನ್ ಆದರಷ್ಟೇ ತಮ್ಮೊಂದಿಗೆ ಊಟದ ಮೇಜು ಹಂಚಿಕೊಳ್ಳಲು ಅರ್ಹನಾಗುತ್ತಿ ಎಂದು ತಂದೆ ಹಾಕಿದ್ದ ಶರತ್ತು ಗೆದ್ದು ಬಂದಿದ್ದ ಖುಷಿ ಲಿಯಾಂಡರ್‌ಗೆ. ಆದರೆ ಅಷ್ಟಕ್ಕೇ ವೇಸ್ ಸುಮ್ಮನಾಗಲಿಲ್ಲ. ‘ನೀನು ಇನ್ನೂ ಡಾಕ್ಟರ್ ಆಗಿಲ್ಲ. ಅದೊಂದು ಕೊರತೆ ಇದೆ’ ಎಂದು ನಕ್ಕಿದ್ದರು.
ಆದರೆ ಅಪ್ಪನಿಗೆ ತಕ್ಕ ಮಗ ಲಿಯಾಂಡರ್ ಕೂಡ ಛಲಗಾರನೇ. ಡಿ.ವೈ ಪಾಟೀಲ ವಿಶ್ವವಿದ್ಯಾಲಯದಲ್ಲಿ ಹಲವು ಸ್ಫೂರ್ತಿಯುತ ಉಪನ್ಯಾಸಗಳನ್ನು ನೀಡುವ ಮೂಲಕ ಗೌರವ ಡಾಕ್ಟರೇಟ್ ಗಳಿಸುವಲ್ಲಿ ಲಿಯಾಂಡರ್ ಯಶಸ್ವಿಯಾದರು.
ಲಿಯಾಂಡರ್‌ಗೆ ಬುದ್ಧಿ ತಿಳಿದಾಗಿನಿಂದಲೂ ಅಪ್ಪ ಸ್ಫೂರ್ತಿ ಮಾತ್ರವಲ್ಲ. ಟೆನಿಸ್ ದಿಗ್ಗಜನ ಪಾಲಿಗೆ ಸರ್ವಸ್ವವೇ ಆಗಿಹೋಗಿದ್ದರು. ಗುರುವಾರ ಬೆಳಿಗ್ಗೆ ವೇಸ್ಪೇ(80) ಜಗದ ವ್ಯವಹಾರ ಮುಗಿಸಿ ಹೊರಟಾಗ ಲಿಯಾಂಡರ್ ಕಂಗಳಲ್ಲಿ ದಃಖ ಧಾರೆಯಾಗಿತ್ತು. ಅವರಷ್ಟೇ ಅಲ್ಲ. ವೇಸ್ ಪೇಸ್ ಅವರೊಂದಿಗೆ ಆಡಿದ, ಒಡನಾಡಿದ, ಪ್ರೇರಣೆಗೊಂಡವರೂ ವಿಷಣ್ಣರಾಗಿದ್ದು ಸುಳ್ಳಲ್ಲ. ವೇಸ್ ಅವರು ತಮ್ಮ ಮಗನಿಗೆ ಮಾತ್ರವಲ್ಲ; ಭಾರತದ ಕ್ರೀಡಾಕ್ಷೇತ್ರಕ್ಕೆ ಮತ್ತು ವೈದ್ಯಕೀಯ ರಂಗಕ್ಕೆ ಸ್ಪೂರ್ತಿ ತುಂಬಿದ ‘ಸಂತ’ನೇ ಆಗಿದ್ದರು.
1972ರಲ್ಲಿ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತ ತಂಡದಲ್ಲಿ ವೇಸ್ ಆಡಿದ್ದರು.
‘ನನಗೆ ತುಂಬಾ ಆತ್ಮೀಯ ಸ್ನೇಹಿತ. ಕೌಶಲಪೂರ್ಣ, ಅಮೋಘ ಆಟಗಾರ. ಮೃದುಭಾಷಿ. ವಿಶ್ವಕಪ್ ಮತ್ತು ಒಲಿಂಪಿಕ್ ಕೂಟಗಳಲ್ಲಿ ಜೊತೆಯಾಗಿ ಆಡಿದ್ದೆವು. ಸಹೃದಯಿ ವ್ಯಕ್ತಿತ್ವ. ಅವರ ಅಗಲಕೆಯು ಹಾಕಿ ಆಟಕ್ಕೆ ಮಾತ್ರವಲ್ಲ. ಇಡೀ ಕ್ರೀಡಾರಂಗಕ್ಕೆ ದೊಡ್ಡ ನಷ್ಟ. ಕ್ರೀಡಾ ವೈದ್ಯನಾಗಿ ಅವರು ನೀಡಿದ ಕಾಣಿಕೆ ಕೂಡ ದೊಡ್ಡದು’ ಎಂದು ಹಾಕಿ ದಂತಕತೆ ಎಂ.ಪಿ. ಗಣೇಶ್ ಅವರು ತಮ್ಮ ಪೇಸ್ ಒಡನಾಟವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.
1945ರಲ್ಲಿ ಗೋವಾದಲ್ಲಿ ಜನಿಸಿದ ವೆಸ್ ಪೇಸ್ ಅವರು ಓದಿನಲ್ಲಿಯೂ ಮುಂದಿದ್ದರು. ಹಾಕಿಯತ್ತ ಅವರ ಒಲವು ಕೂಡ ಕುತೂಹಲಕಾರಿ. ಮಿಡ್‌ಫೀಲ್ಡರ್ ಆಗಿ ಆಡಿದ ಅವರು, ಎಂಬಿಬಿಎಸ್ ಅಧ್ಯಯನ ಮಾಡುವ ಸಂದರ್ಭದಲ್ಲಿ 1971ರ ವಿಶ್ವಕಪ್ ಹಾಕಿ ಮತ್ತು 1972ರ ಒಲಿಂಪಿಕ್ ಕೂಟಗಳಲ್ಲಿ ಆಡಿದ್ದರು. ಅಷ್ಟೇ ಅಲ್ಲ. ಪದಕವಿಜೇತರೂ ಆಗಿದ್ದರು. ಹಾಕಿ ಆಟಕ್ಕೆ ವಿದಾಯ ಹೇಳಿದ ನಂತರ ಅವರು ಕ್ರೀಡಾ ವೈದ್ಯರಾದರು. ಕ್ರೀಡಾಕ್ಷೇತ್ರದೊಂದಿಗೆ ಸತತ ನಂಟು ಉಳಿಸಿಕೊಳ್ಳುವ ಉದ್ದೇಶದಿಂದಲೇ ಅವರು ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದರು. ಕ್ರಿಕೆಟ್, ಟೆನಿಸ್, ಫುಟ್‌ಬಾಲ್ ಹಾಗೂ ರಗ್ಬಿ ಆಟದೊಂದಿಗೆ ಅವರದ್ದು ಬಿಡಿಸಲಾರದ ನಂಟು. 2018ರಲ್ಲಿ ಮುಂಬೈನಲ್ಲಿ ಬಿಸಿಸಿಐ ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದರು. ಆರು ವರ್ಷಗಳ ಕಾಲ (1996–2002) ಭಾರತ ರಗ್ಬಿ ಒಕ್ಕೂಟದ ಅಧ್ಯಕ್ಷರಾಗಿದ್ದರು.
ಭಾರತೀಯ ಹಾಕಿ ಮತ್ತು ಅದರಾಚೆಗೂ ವೆಸ್ ಅವರ ಕೊಡುಗೆ ಮಹತ್ವದ್ದು. ಅವರ ಶಾಂತ ವರ್ತನೆ, ಮಿಡ್‌ಫೀಲ್ಡ್‌ನಲ್ಲಿ ಅವರು ಕೊಡುತ್ತಿದ್ದ ಪಾಸ್‌ಗಳು ಮತ್ತು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಕ್ರೀಡೆಗಳ ಬಗೆಗಿನ ಶ್ರದ್ಧೆ ಅವರನ್ನು ಅರ್ಥದಲ್ಲಿ ಭಾರತೀಯ ಹಾಕಿಯ ಸಂತರನ್ನಾಗಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.