ADVERTISEMENT

ವಿನೇಶಾ ಫೋಗಟ್ ಅನರ್ಹತೆ: ಕೂಲಂಕಷ ತನಿಖೆಗೆ ಅಖಿಲೇಶ್ ಯಾದವ್ ಆಗ್ರಹ

ಪಿಟಿಐ
Published 7 ಆಗಸ್ಟ್ 2024, 9:49 IST
Last Updated 7 ಆಗಸ್ಟ್ 2024, 9:49 IST
<div class="paragraphs"><p> ವಿನೇಶಾ ಫೋಗಟ್ (ಕಡತ ಚಿತ್ರ)</p></div>

ವಿನೇಶಾ ಫೋಗಟ್ (ಕಡತ ಚಿತ್ರ)

   

ಲಖನೌ: ಅಧಿಕ ತೂಕದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಆಡಲು ಅವಕಾಶ ಸಿಗದೆ ಅನರ್ಹಗೊಂಡ ಭಾರತದ ಕುಸ್ತಿ ಪಟು ವಿನೇಶಾ ಫೋಗಟ್ ಪ್ರಕರಣದ ಕೂಲಂಕಷ ತನಿಖೆಗೆ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.

ಒಲಿಂಪಿಕ್ ಕುಸ್ತಿಯಲ್ಲಿ ಫೈನಲ್‌ಗೇರಿದ ಭಾರತದ ಮೊದಲ ಕ್ರೀಡಾಪಟು ಎಂಬ ಖ್ಯಾತಿಗೆ ವಿನೇಶಾ ಪಾತ್ರರಾಗಿದ್ದರು.

‘ವಿನೇಶಾ ಫೋಗಟ್‌ಗೆ ಫೈನಲ್‌ನಲ್ಲಿ ಆಡಲು ಅವಕಾಶ ನೀಡದೇ ಇರುವುದಕ್ಕೆ ಕಾರಣವಾದ ತಾಂತ್ರಿಕ ಕಾರಣಗಳ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಇದರ ಹಿಂದಿರುವ ಸತ್ಯ ಮತ್ತು ನಿಜವಾದ ಕಾರಣ ಹೊರಬರಬೇಕು’ಎಂದಿದ್ದಾರೆ.

ಭಾರತದ ಒಲಿಂಪಿಕ್ಸ್ ಸಂಸ್ಥೆಯು(ಐಒಸಿ) ವಿನೇಶಾ ಅನರ್ಹತೆಯನ್ನು ಖಚಿತಪಡಿಸಿದ್ದು, ಆಕೆಯ ಖಾಸಗಿತನವನ್ನು ಗೌರವಿಸುವಂತೆ ಒತ್ತಾಯಿಸಿದೆ.

‘ಒಲಿಂ‍ಪಿಕ್ಸ್‌ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದಲ್ಲಿ ವಿನೇಶಾ ಫೋಗಟ್ ಅನರ್ಹಗೊಂಡಿರುವ ಸುದ್ದಿಯನ್ನು ಭಾರತ ತಂಡ ಹಂಚಿಕೊಂಡಿದೆ. ರಾತ್ರಿ ಇಡೀ ನಮ್ಮ ತಂಡವು ಸಾಕಷ್ಟು ಶ್ರಮ ವಹಿಸಿ ತಯಾರಿ ನಡೆಸಿದರೂ ಸಹ ಇಂದು ಬಳಿಗ್ಗೆ ವಿನೇಶಾ ಅವರ ತೂಕ 50 ಕೆ.ಜಿಗಿಂತ ಕೆಲವು ಗ್ರಾಂಗಳಷ್ಟು ಹೆಚ್ಚಳವಾಗಿತ್ತು’ಎಂದು ಐಒಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ವಿನೇಶಾ 5–0 ಯಿಂದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ವಿರುದ್ಧ ಗೆದ್ದಿದ್ದರು.

ವಿನೇಶಾ ಅವರು ಮಂಗಳವಾರ ಇಡೀ ದಿನದಲ್ಲಿ ಆಡಿದ ಮೂರು ಬೌಟ್‌ಗಳಲ್ಲಿಯೂ ಪಾರಮ್ಯ ಮೆರೆದಿದ್ದು ವಿಶೇಷ. ಅದರಲ್ಲೂ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ವಿಶ್ವ ಚಾಂಪಿಯನ್ ಮತ್ತು ಹೋದ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಕುಸ್ತಿಪಟು, ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್‌ ಅವರ ಸವಾಲನ್ನು 7–5 ರಿಂದ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.