ADVERTISEMENT

ಲೆಜೆಂಡ್ಸ್‌ ಚೆಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ವಿಶ್ವನಾಥನ್ ಆನಂದ್‌

ಪಿಟಿಐ
Published 20 ಜುಲೈ 2020, 14:53 IST
Last Updated 20 ಜುಲೈ 2020, 14:53 IST
ವಿಶ್ವನಾಥನ್‌ ಆನಂದ್‌–ಪಿಟಿಐ ಚಿತ್ರ
ವಿಶ್ವನಾಥನ್‌ ಆನಂದ್‌–ಪಿಟಿಐ ಚಿತ್ರ   

ಚೆನ್ನೈ: ಭಾರತದ ಖ್ಯಾತ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಅವರು ಚೆಸ್‌24 ಲೆಜೆಂಡ್ಸ್‌ ಟೂರ್ನಿಯಲ್ಲಿ ಆಡಲಿದ್ದಾರೆ. ಆನ್‌ಲೈನ್‌ ಮೂಲಕ ನಡೆಯಲಿರುವ ಟೂರ್ನಿಯ ಮೊದಲ ಹಣಾಹಣಿಯಲ್ಲಿ ಅವರು ರಷ್ಯಾದ ಪೀಟರ್‌ ಸ್ವಿಡ್ಲರ್‌ ಅವರನ್ನು ಎದುರಿಸಲಿದ್ದಾರೆ.

ಮ್ಯಾಗ್ನಸ್‌ ಕಾರ್ಲ್‌ಸನ್‌ ಚೆಸ್‌ ಟೂರ್‌ನ ಭಾಗವಾಗಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಆನಂದ್‌ ಅವರು ಮೊದಲ ಬಾರಿ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಎಂಟು ಬಾರಿ ರಷ್ಯಾ ಚಾಂಪಿಯನ್‌ ಆಗಿರುವ ಪೀಟರ್, 2011ರ ವಿಶ್ವಕಪ್‌ ವಿಜೇತರೂ ಹೌದು. ಪೀಟರ್‌ ಎದುರಿನ ಪಂದ್ಯದ ಬಳಿಕ ಆನಂದ್‌ ಅವರಿಗೆ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಮ್ಯಾಗ್ನಸ್‌ ಕಾರ್ಲಸನ್‌, ವ್ಲಾಡಿಮಿರ್‌ ಕ್ರಾಮ್ನಿಕ್‌, ಅನೀಶ್‌ ಗಿರಿ, ಪೀಟರ್ ಲೇಕೊ, ಇಯಾನ್‌ ನೆಪೊಮ್‌ನೈಚಿ, ಬೊರಿಸ್‌ ಗೆಫ್‌ಲ್ಯಾಂಡ್‌, ಡಿಂಗ್‌ ಲಿರೆನ್‌ ಹಾಗೂ ವಾಸಿಲ್‌ ಇವಾನ್‌ಚುಕ್‌ ಎದುರಾಗಲಿದ್ದಾರೆ.

ಮಂಗಳವಾರ ರೌಂಡ್‌ ರಾಬಿನ್‌ ಮಾದರಿಯಲ್ಲಿ (ಬೆಸ್ಟ್‌ ಆಫ್‌ ಫೋರ್‌ ಸ್ಪರ್ಧೆಗಳು) ಪಂದ್ಯಗಳು ಆರಂಭವಾಗಲಿವೆ. ಆಗಸ್ಟ್‌ ಐದರವರೆಗೆ ಈ ಟೂರ್ನಿಯು ನಡೆಯಲಿದೆ. ಆನಂದ್‌ ಅವರು ಕೋವಿಡ್‌ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧದ ಕಾರಣ ಮೂರು ತಿಂಗಳ ಕಾಲ ಜರ್ಮನಿಯಲ್ಲಿ ಸಿಲುಕಿಕೊಂಡಿದ್ದರು. ತವರಿಗೆ ಮರಳಿದ ಬಳಿಕ ಅವರಿಗಿದು ಮೊದಲ ಆನ್‌ಲೈನ್‌ ಟೂರ್ನಿ. ಜರ್ಮನಿಯಲ್ಲಿದ್ದಾಗ ನೇಷನ್ಸ್‌ ಕಪ್‌ ಆನ್‌ಲೈನ್‌ ಟೂರ್ನಿಯಲ್ಲಿ ಆಡಿದ್ದರು.

ADVERTISEMENT

ಮ್ಯಾಗ್ನಸ್‌ ಕಾರ್ಲ್‌ಸನ್‌ ಟೂರ್‌ನ ಭಾಗವಾಗಿಯೇ ನಡೆದ ಚೆಸೆಬಲ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದ ಕಾರ್ಲಸನ್‌, ಲಿರೆನ್‌,ನೆಪೊಮ್‌ನೈಚಿ ಹಾಗೂ ಗಿರಿ ಅವರು ಚೆಸ್‌24 ಲೆಜೆಂಡ್ಸ್‌ ಟೂರ್ನಿಗೆ ಸ್ವಯಂ ಅರ್ಹತೆ ಗಿಟ್ಟಿಸಿದ್ದಾರೆ. ಇವರು 40–52 ವಯೋಮಾನದ, ವಿವಿಧ ಹಂತಗಳಲ್ಲಿ ವಿಶ್ವ ಚೆಸ್‌ನಲ್ಲಿ ಪ್ರಮುಖ ಸ್ಥಾನ ಗಳಿಸಿದ್ದ ಆಟಗಾರರ ಎದುರು ಆಡಲಿದ್ದಾರೆ.

ಲೆಜೆಂಡ್ಸ್‌ ಆಫ್ ಚೆಸ್‌ ಟೂರ್ನಿಯಲ್ಲಿ ವಿಜೇತರಾದವರು, ಮ್ಯಾಗ್ನಸ್‌ ಕಾರ್ಲ್‌ಸನ್‌ ಟೂರ್‌ನ ಗ್ರ್ಯಾಂಡ್‌ ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಆಗಸ್ಟ್‌ 9ರಿಂದ 20ರವರೆಗೆ ಈ ಫೈನಲ್ಸ್‌ ನಿಗದಿಯಾಗಿದೆ.

‘ಚೆಸ್‌ಗೆ ಮರಳಲು ಕಾತರನಾಗಿದ್ದೇನೆ. ಅದರಲ್ಲೂ ಮುಖ್ಯವಾಗಿ ಬೇರೆ ಬೇರೆ ಪೀಳಿಗೆಯ ಆಟಗಾರರ ಎದುರು ಸ್ಪರ್ಧಿಸಲು ಉತ್ಸುಕನಾಗಿದ್ದೇನೆ‘ ಎಂದು ಆನಂದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.