ADVERTISEMENT

ವಾಲಿಬಾಲ್ ಹಬ್ಬಕ್ಕೆ ಬೆಂಗಳೂರು ಸಜ್ಜು

ಇಂದಿನಿಂದ ಎಫ್‌ಐವಿಬಿ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌: ಡಿಫೆಂಡರ್ಸ್‌ ಮೇಲೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:48 IST
Last Updated 5 ಡಿಸೆಂಬರ್ 2023, 16:48 IST
   

ಬೆಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಎಫ್‌ಐವಿಬಿ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ನ ಆತಿಥ್ಯಕ್ಕೆ ಬೆಂಗಳೂರು ಸಜ್ಜಾಗಿದೆ. ಕೂಟದ 19ನೇ ಆವೃತ್ತಿಯು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿದೆ. 2023ರ ಪ್ರೈಮ್ ವಾಲಿಬಾಲ್ ಲೀಗ್‌ನ (ಪಿವಿಎಲ್) ಚಾಂಪಿಯನ್ ತಂಡವಾದ ಅಹಮದಾಬಾದ್ ಡಿಫೆಂಡರ್ಸ್ ಈ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ತವರಿನಲ್ಲೇ ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಅಹಮದಾಬಾದ್ ಡಿಫೆಂಡರ್ಸ್ (ಭಾರತ) ತಂಡದೊಂದಿಗೆ ಹಾಲಿ ಚಾಂಪಿಯನ್‌ ಸರ್ ಸಿಕೋಮಾ ಪೆರುಗಿಯಾ (ಇಟಲಿ), ಸದಾ ಕ್ರೂಝೈರೊ ವೊಲಿ ಮತ್ತು ಇಟಾಂಬೆ ಮಿನಾಸ್ ಟೆನಿಸ್ ಕ್ಲಬ್ (ಬ್ರೆಜಿಲ್), ಸುಂಟೋರಿ ಸನ್‌ಬರ್ಡ್ಸ್ ಕ್ಲಬ್ (ಜಪಾನ್) ಹಾಗೂ ಹಾಲ್ಕ್‌ಬ್ಯಾಂಕ್ ಸ್ಪೋರ್ ಕುಲುಬು (ಟರ್ಕಿ) ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ. ಡಿಫೆಂಡರ್ಸ್‌ ತಂಡವನ್ನು ಮುತ್ತುಸ್ವಾಮಿ ಅಪ್ಪಾವು ಮುನ್ನಡೆಸಲಿದ್ದು, ಕರ್ನಾಟಕದ ಸೃಜನ್ ಶೆಟ್ಟಿ, ಅಶ್ವಲ್ ರೈ, ಅಜ್ಮತ್ ಹಾಗೂ ಮನೋಜ್ ಸ್ಥಾನ ಪಡೆದಿದ್ದಾರೆ. 

ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ತಂಡವೊಂದು ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ. ಡಿಫೆಂಡರ್ಸ್‌ ತಂಡದ ಆಟಗಾರರು ಕೆಲ ದಿನಗಳಿಂದ ಬೆಂಗಳೂರಿನಲ್ಲೇ ಅಭ್ಯಾಸ ನಡೆಸುತ್ತಿದ್ದು, ಪ್ರಬಲ ತಂಡಗಳಿಗೆ ಉತ್ತಮ ಪೈಪೋಟಿ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಟೂರ್ನಿಯು ಡಿ.10ರ ವರೆಗೆ ನಡೆಯಲಿದ್ದು, ತಲಾ ಮೂರು ತಂಡಗಳ ಎರಡು ಗುಂಪುಗಳನ್ನು ರಚಿಸಲಾಗಿದೆ.

ADVERTISEMENT

‘ಎ’ ತಂಡದಲ್ಲಿ ಡಿಫೆಂಡರ್ಸ್‌ ಜತೆ ಸರ್ ಸಿಕೋಮಾ ಮತ್ತು ಮಿನಾಸ್ ತಂಡವಿದೆ. ಆತಿಥೇಯ ತಂಡವು ಮೊದಲ ಲೀಗ್‌ ಪಂದ್ಯದಲ್ಲಿ ಇಟಾಂಬೆ ಮಿನಾಸ್‌ (ಡಿ.6) ಮತ್ತು ಎರಡನೇ ಪಂದ್ಯದಲ್ಲಿ ಸರ್ ಸಿಕೋಮಾ ತಂಡವನ್ನು ಎದುರಿಸಲಿದೆ. ಡಿ.9ರಂದು ಸೆಮಿಫೈನಲ್‌ ಪಂದ್ಯಗಳು ಮತ್ತು 10ರಂದು ಫೈನಲ್‌ ಹಾಗೂ ಮೂರನೇ ಸ್ಥಾನ ನಿರ್ಣಯದ ಪಂದ್ಯಗಳು ನಡೆಯಲಿವೆ.

‘ಭಾರತದಲ್ಲಿ ವಾಲಿಬಾಲ್‌ ಕ್ರೀಡೆ ಈಚೆಗೆ ಜನಪ್ರಿಯವಾಗುತ್ತಿದೆ. ಪ್ರೈಮ್ ವಾಲಿಬಾಲ್ ಲೀಗ್‌ ಬಳಿಕ ವಾಲಿಬಾಲ್ ಕ್ರೀಡೆಗೂ ಅಭಿಮಾನಿಗಳಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ‌. ಈ ಟೂರ್ನಿಯಲ್ಲಿ ವಿವಿಧ ದೇಶಗಳ ವಿಶ್ವಮಟ್ಟದ ವಾಲಿಬಾಲ್ ಆಟಗಾರರು ಭಾಗವಹಿಸಲಿದ್ದು, ಅವರೊಂದಿಗೆ ಸ್ಪರ್ಧಿಸುವುದು ನಮಗೆ ಹೆಮ್ಮೆಯ ವಿಚಾರ. ಈ ಅನುಭವ ನಮ್ಮ ಕ್ರೀಡಾ ಭವಿಷ್ಯಕ್ಕೂ ಅನುಕೂಲವಾಗಲಿದೆ’ ಎಂದು ಡಿಫೆಂಡರ್ಸ್‌ ತಂಡದ ಆಟಗಾರ, ಉಡುಪಿಯ ಸೃಜನ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಇಂದಿನ ಪಂದ್ಯಗಳು

ಹಾಲ್ಕ್‌ಬ್ಯಾಂಕ್ ಸ್ಪೋರ್– ಸುಂಟೋರಿ ಸನ್‌ಬರ್ಡ್ಸ್ (ಸಂಜೆ 5)

ಅಹಮದಾಬಾದ್ ಡಿಫೆಂಡರ್ಸ್– ಇಟಾಂಬೆ ಮಿನಾಸ್ (ರಾತ್ರಿ 8.30)

ನೇರಪ್ರಸಾರ: ಸೋನಿ ಸ್ಪೋರ್ಟ್‌ ನೆಟ್‌ವರ್ಕ್‌, ಫ್ಯಾನ್‌ ಕೋಡ್‌ ಆ್ಯಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.