ADVERTISEMENT

ವೇಟ್‌ಲಿಫ್ಟಿಂಗ್: ಕಂಚು ಗೆದ್ದ ಲವಪ್ರೀತ್‌ ಸಿಂಗ್

ವೇಟ್‌ಲಿಫ್ಟಿಂಗ್: ಪುರುಷರ 109 ಕೆ.ಜಿ. ವಿಭಾಗದಲ್ಲಿ ಸಾಧನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 16:02 IST
Last Updated 3 ಆಗಸ್ಟ್ 2022, 16:02 IST
ಪುರುಷರ 109 ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದ ಲವಪ್ರೀತ್‌ ಸಿಂಗ್ –ಎಎಫ್‌ಪಿ ಚಿತ್ರ
ಪುರುಷರ 109 ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದ ಲವಪ್ರೀತ್‌ ಸಿಂಗ್ –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಮ್ (ಪಿಟಿಐ): ಕಾಮನ್‌ವೆಲ್ತ್‌ ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದ್ದು, ಲವಪ್ರೀತ್‌ ಸಿಂಗ್‌ ಅವರು ಪುರುಷರ 109 ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದರು.

ಬುಧವಾರ ನಡೆದ ಸ್ಪರ್ಧೆಯಲ್ಲಿ ಅವರು ಒಟ್ಟು 355 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 163 ಕೆ.ಜಿ ಹಾಗೂ ಕ್ಲೀನ್– ಜರ್ಕ್‌ನಲ್ಲಿ 192 ಕೆ.ಜಿ ಸಾಧನೆ ಮಾಡಿದರು.

ಸ್ನ್ಯಾಚ್‌ನಲ್ಲಿ 157 ಕೆ.ಜಿ.ಯೊಂದಿಗೆ ಸ್ಪರ್ಧೆ ಆರಂಭಿಸಿದ ಅವರು ಕೊನೆಯ ಪ್ರಯತ್ನದಲ್ಲಿ 163 ಕೆ.ಜಿ. ಭಾರ ಎತ್ತಿದರು. ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಮೂರು ಅವಕಾಶಗಳಲ್ಲಿ ಕ್ರಮವಾಗಿ 185 ಕೆ.ಜಿ, 189 ಕೆ.ಜಿ ಮತ್ತು 192 ಕೆ.ಜಿ. ಭಾರ ಎತ್ತಿದರು.

ADVERTISEMENT

ಕ್ಯಾಮರೂನ್‌ನ ಜೂನಿಯರ್‌ ಎನ್ಯಬೆಯು 361 ಕೆ.ಜಿ. ಯೊಂದಿಗೆ ಚಿನ್ನ ಗೆದ್ದರು. ಸ್ನ್ಯಾಚ್‌ ಮತ್ತು ಕ್ಲೀನ್‌– ಜರ್ಕ್‌ನಲ್ಲಿ ಅವರು ಕ್ರಮವಾಗಿ 160 ಕೆ.ಜಿ ಹಾಗೂ 201 ಕೆ.ಜಿ ಸಾಧನೆ ಮಾಡಿದರು. ಸಮೋವದ ಜಾಕ್‌ ಒಪೆಲೊಗ್ (358 ಕೆ.ಜಿ) ಬೆಳ್ಳಿ ಪಡೆದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಾನು ಪಾಲ್ಗೊಂಡ ಅತಿದೊಡ್ಡ ಕ್ರೀಡಾಕೂಟ ಇದು. ಶ್ರೇಷ್ಠ ಸಾಧನೆ ತೋರಿ, ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು 24 ವರ್ಷದ ಲವಪ್ರೀತ್‌ ಸಂತಸ ವ್ಯಕ್ತಪಡಿಸಿದರು.

ಪೂರ್ಣಿಮಾಗೆ 6ನೇ ಸ್ಥಾನ: ಪೂರ್ಣಿಮಾ ಪಾಂಡೆ, ಮಹಿಳೆಯರ 87 ಕೆ.ಜಿ. ವಿಭಾಗದಲ್ಲಿ ಆರನೇ ಸ್ಥಾನ ಪಡೆದರು. ಅವರು ಒಟ್ಟು 228 ಕೆ.ಜಿ. (103+125) ಭಾರ ಎತ್ತಿದರು. 286 ಕೆ.ಜಿ ಎತ್ತಿದ ಇಂಗ್ಲೆಂಡ್‌ನ ಎಮಿಲಿ ಕ್ಯಾಂಪ್‌ಬೆಲ್ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಇದುವರೆಗೆ ಮೂರು ಚಿನ್ನ ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.